ನನ್ನ ಬಾಳಿನ ಬೆಳಕು : ಅನುಷ್ಕಾ ಜೊತೆಗಿನ ಕೊಹ್ಲಿಯವರ ಹೊಸ ವರ್ಷದ ಪೋಸ್ಟ್ ವೈರಲ್
Virat Kohli’s Instagram post
ಹೊಸದಿಲ್ಲಿ: ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮದ ಕ್ಷಣವನ್ನು ಕ್ರಿಕೆಟ್ ಐಕಾನ್ ವಿರಾಟ್ ಕೊಹ್ಲಿ ಹಂಚಿಕೊಂಡರು. ಈ ಕುರಿತ ಕೊಹ್ಲಿ ಅವರ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಾಸ್ಕ್ ಗಳನ್ನು ಧರಿಸಿರುವ ಚಿತ್ರವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರದ ಪಕ್ಕದಲ್ಲಿ "ನನ್ನ ಬಾಳಿನ ಬೆಳಕಿನೊಂದಿಗೆ 2026ಕ್ಕೆ ಹೆಜ್ಜೆ ಇಡುತ್ತಿದ್ದೇನೆ" ಎಂದು ಶೀರ್ಷಿಕೆ ನೀಡಿದ್ದು, ಇದಕ್ಕೆ ಅಭಿಮಾನಿಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ಹೊಸ ವರ್ಷದ ಆರಂಭದ ದಿನ ಮೆಸೇಜ್‍ಗಳ ಸುರಿಮಳೆ ಕಂಡುಬಂದಿದೆ.
ಟಿ20 ಕ್ರಿಕೆಟ್‍ನಿಂದ ಈಗಾಗಲೇ ನಿವೃತ್ತಿ ಘೋಷಿಸಿರುವ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ಮುಂದುವರಿಸಿದ್ದಾರೆ. 15 ವರ್ಷಗಳ ಬಳಿಕ ಮೊದಲ ಬಾರಿಗೆ ದೇಶಿ ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರುವ ಕೊಹ್ಲಿ ಸತತ ಎರಡು ಇನ್ನಿಂಗ್ಸ್ ಗಳಲ್ಲಿ 131 ಹಾಗೂ 77 ರನ್ ಸಿಡಿಸಿದ್ದರು.
ಲಿಸ್ಟ್ ಎ ಕ್ರಿಕೆಟ್‍ನಲ್ಲಿ ಇತಿಹಾಸ ಸೃಷ್ಟಿಸಿರುವ ಕೊಹ್ಲಿ 16 ಸಾವಿರ ರನ್‍ಗಳ ಗಡಿಯನ್ನು ವೇಗವಾಗಿ ದಾಟಿರುವ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ಸುಧೀರ್ಘ ದಾಖಲೆಯನ್ನು ಮುರಿದಿದ್ದಾರೆ. ಹೊಸ ವರ್ಷದಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಕೊಹ್ಲಿ ಎದುರು ನೋಡುತ್ತಿದ್ದಾರೆ. ವಡೋದರಲ್ಲಿ ಜ.11ರಂದು ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ಜ.14 ಹಾಗೂ 18ರಂದು ರಾಜ್‍ಕೋಟ್ ಮತ್ತು ಇಂದೋರ್ ನಲ್ಲಿ ಪಂದ್ಯಗಳು ನಡೆಯಲಿವೆ.