ಮಹಿಳೆಯರ ಕ್ರಿಕೆಟ್ : ವಿಶ್ವಕಪ್ ಗೆದ್ದ ನಾಲ್ಕನೇ ರಾಷ್ಟ್ರವಾಗಿ ಭಾರತ
PC | X@ICC
ಮುಂಬೈ : ಬಾರತದ ಮಹಿಳಾ ತಂಡವು ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಫೈನಲ್ ತಲುಪಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ವಿಶ್ವಕಪ್ ಗೆದ್ದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2005 ಹಾಗೂ 2017ರ ವಿಶ್ವಕಪ್‍ನಲ್ಲಿ ಫೈನಲ್‍ನಲ್ಲಿ ಸೋತ ಭಾರತ, ಇದೇ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‍ಗಳ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.
1973ರಲ್ಲಿ ಆರಂಭವಾದ ಮಹಿಳಾ ವಿಶ್ವಕಪ್‍ನಲ್ಲಿ ಇದುವರೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ತಂಡಗಳಷ್ಟೇ ಪ್ರಶಸ್ತಿ ಗೆದ್ದಿದ್ದವು. 1973ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಮೊಟ್ಟಮೊದಲ ವಿಶ್ವಕಪ್ ಗೆದ್ದ ಕೀರ್ತಿಗೆ ಇಂಗ್ಲೆಂಡ್ ಪಾತ್ರವಾಯಿತು. ಆದರೆ ಆ ಬಳಿಕ ಆಸ್ಟ್ರೇಲಿಯಾ ತಂಡ ಸತತ ಮೂರು ಬಾರಿ ಗೆದ್ದು ಪ್ರಶಸ್ತಿಯ ಹ್ಯಾಟ್ರಿಕ್ ಸಾಧಿಸಿತು. ಮೂರು ಬಾರಿಯೂ ಇಂಗ್ಲೆಂಡ್ ವಿರುದ್ಧ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಗೆದ್ದಿತು.
ಮೊದಲ ಪ್ರಶಸ್ತಿ ಗೆದ್ದ ಇಪ್ಪತ್ತು ವರ್ಷಗಳ ಬಳಿಕ ಇಂಗ್ಲೆಂಡ್ ತಂಡ 1993ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಗೆದ್ದು ಪ್ರಶಸ್ತಿಗೆ ಭಾಜನವದರೆ, 2000ನೇ ಇಸ್ವಿಯಲ್ಲಿ ನ್ಯೂಝಿಲ್ಯಾಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್‍ನಲ್ಲಿ ಗೆಲುವು ಸಾಧಿಸಿ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದಾದ 25 ವರ್ಷ ಬಳಿಕ ವಿಶ್ವ ಹೊಸ ಚಾಂಪಿಯನ್ನರನ್ನು ಕಂಡಿದೆ.
ಆಸ್ಟ್ರೇಲಿಯಾ ತಂಡ ಆ ಬಳಿಕ 2005, 2013 ಮತ್ತು 2022ರಲ್ಲಿ ಪ್ರಶಸ್ತಿ ಗೆದ್ದಿದ್ದು, 2009 ಮತ್ತು 2017ರಲ್ಲಿ ಇಂಗ್ಲೆಂಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. 2025ರಲ್ಲಿ ಅತಿಥೇಯ ಭಾರತ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸೆಮಿಫೈನಲ್‍ನಲ್ಲಿ ಭಾರತದ ವನಿತೆಯರು ಆಸ್ಟ್ರೇಲಿಯಾ ವಿರುದ್ಧ 338 ರನ್‍ಗಳನ್ನು ಬೆನ್ನಟ್ಟಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದರು.