ಬಾಕ್ಸಿಂಗ್ ಫೆಡರೇಶನ್ ಮುಖ್ಯಸ್ಥರು ಅಗೌರವಯುತವಾಗಿ ನಡೆದುಕೊಂಡಿದ್ದಾರೆ : ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಆರೋಪ
ಹೊಸದಿಲ್ಲಿ, ಆ. 7: ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್ಐ)ನ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಅರುಣ್ ಮಲಿಕ್ ತನ್ನೊಂದಿಗೆ ‘‘ಅಗೌರವಯುತ’’ವಾಗಿ ನಡೆದುಕೊಂಡಿದ್ದಾರೆ ಮತ್ತು ‘‘ಲಿಂಗ ತಾರತಮ್ಯ’’ದ ಧೋರಣೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಆರೋಪಿಸಿದ್ದಾರೆ.
ಜುಲೈ 8ರಂದು ನಡೆದ ಝೂಮ್ ಸಭೆಯೊಂದರಲ್ಲಿ ಮಲಿಕ್ ನನ್ನನ್ನು ಅವಮಾನಿಸಿದ್ದಾರೆ ಮತ್ತು ನನ್ನ ಸಾಧನೆಗಳನ್ನು ಕಡೆಗಣಿಸಿದ್ದಾರೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ, ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಮಹಾನಿರ್ದೇಶಕರು, ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ)ನ ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಿಒಪಿಎಸ್) ವಿಭಾಗ ಮತ್ತು ಭಾರತೀಯ ಬಾಕ್ಸಿಂಗ್ ಫೆಡರೇಶನ್‌ಗೆ ಸಲ್ಲಿಸಿರುವ ದೂರಿನಲ್ಲಿ ಬಾಕ್ಸಿಂಗ್ ತಾರೆ ಹೇಳಿದ್ದಾರೆ.
ಆ ಸಭೆಯಲ್ಲಿ, ರಾಷ್ಟ್ರೀಯ ಶಿಬಿರಕ್ಕೆ ಬರಲು ತನ್ನ ವೈಯಕ್ತಿಕ ಕೋಚ್‌ಗೆ ಅನುಮತಿ ನೀಡಬೇಕು ಎಂಬುದಾಗಿ ಲವ್ಲೀನಾ ವಿನಂತಿಸಿದ್ದರು. ಯುರೋಪ್‌ನಲ್ಲಿ ತರಬೇತಿ ಪಡೆಯಲು ಹೋಗುವಾಗ ತನ್ನೊಂದಿಗೆ ಹೋಗಲು ಕೋಚ್‌ಗೂ ಅನುಮತಿ ನೀಡಬೇಕು ಎಂಬುದಾಗಿಯೂ ಅವರು ಕೋರಿಕೆ ಸಲ್ಲಿಸಿದ್ದರು. ಆ ಸಭೆಯಲ್ಲಿ ಅವರ ವೈಯಕ್ತಿಕ ಕೋಚ್ ಕೂಡ ಹಾಜರಾಗಿದ್ದರು.
ಈ ಮನವಿಗೆ ಮಲಿಕ್ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದರು ಮತ್ತು ಅವಮಾನಕರ ರೀತಿಯಲ್ಲಿ ಮಾತನಾಡಿದರು ಎಂದು ಲವ್ಲೀನಾ ಆರೋಪಿಸಿದ್ದಾರೆ. ‘‘‘ಬಾಯಿ ಮುಚ್ಚಿ, ನಿಮ್ಮ ತಲೆಯನ್ನು ತಗ್ಗಿಸಿ ಮತ್ತು ನಾವು ಹೇಳಿದ ಹಾಗೆ ಮಾಡಿ’ ಎಂದು ಅವರು ಹೇಳಿದರು. ಅವರ ಮಾತುಗಳು ಅವಮಾನಕರ ಮಾತ್ರವಲ್ಲ, ಲಿಂತ ತಾರತಮ್ಯ ಮತ್ತು ಸರ್ವಾಧಿಕಾರಿ ಧೋರಣೆಯಿಂದಲೂ ಕೂಡಿತ್ತು. ಇಂಥ ಮಾತುಗಳನ್ನು ಅವರು ಯಾರಿಗೂ, ವಿಶೇಷವಾಗಿ ದೇಶಕ್ಕೆ ಗೌರವ ತಂದಿರುವ ಓರ್ವ ಮಹಿಳೆಗೆ ಹೇಳಬಾರದು’’ ಎಂದು ತನ್ನ ದೂರಿನಲ್ಲಿ ಲವ್ಲೀನಾ ಹೇಳಿದ್ದಾರೆ.
‘‘ನಾನು ಏನೂ ಅಲ್ಲ, ನನಗೆ ಮಾತನಾಡುವ ಅಧಿಕಾರವೇ ಇಲ್ಲ ಎನ್ನುವ ಭಾವನೆ ನನ್ನಲ್ಲಿ ಬರುವಂತೆ ಅವರು ಮಾಡಿದರು. ಅದು ಕೇವಲ ನನಗೊಬ್ಬಳಿಗೆ ಮಾಡಿದ ಅವಮಾನವಲ್ಲ, ರಿಂಗ್‌ನ ಒಳಗೆ ಮತ್ತು ಹೊರಗೆ ತಲೆಯೆತ್ತಿ ನಿಲ್ಲುವ ಕನಸುಗಳನ್ನು ಹೊತ್ತಿರುವ ಪ್ರತಿಯೋರ್ವ ಮಹಿಳಾ ಕ್ರೀಡಾಪಟುಗಳ ಮೇಲೆ ಮಾಡಿದ ದಾಳಿಯಾಗಿದೆ’’ ಎಂದು ಅವರು ಹೇಳಿದ್ದಾರೆ.
ಈ ಆರೋಪಗಳನ್ನು ‘‘ಸ್ಪಷ್ಟವಾಗಿ’’ ತಳ್ಳಿಹಾಕಿರುವ ಮಲಿಕ್, ಇದರಲ್ಲಿ ‘‘ಸತ್ಯಾಂಶವಿಲ್ಲ’’ ಎಂದು ಹೇಳಿದ್ದಾರೆ. ಲವ್ಲೀನಾರ ಮನವಿಯನ್ನು ಪರಿಶೀಲಿಸಲಾಯಿತು ಮತ್ತು ಗೌರವಯುತವಾಗಿ ತಿರಸ್ಕರಿಸಲಾಯಿತು, ಯಾಕೆಂದರೆ ಬಿಎಫ್ಐನಲ್ಲಿ ಅಂಥ ನಿಯಮಗಳಿಲ್ಲ ಎಂದು ಹೇಳಿದ್ದಾರೆ.
► ತನಿಖೆಗೆ ಸಮಿತಿ ರಚನೆ
ಭಾರತೀಯ ಬಾಕ್ಸಿಂಗ್ ಫೆಡರೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕರ್ನಲ್ ಅರುಣ್ ಮಲಿಕ್ ವಿರುದ್ಧ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಮತ್ತು ವರದಿಯನ್ನು ಶೀಘ್ರವೇ ಸಲ್ಲಿಸಲಾಗುವುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೂರನ್ನು ಗಣನೆಗೆ ತೆಗೆದುಕೊಂಡಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ), ತನಿಖೆಗಾಗಿ ಟಿಒಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಜೋಹಲ್, ಐಒಎನ ಅತ್ಲೀಟ್ಸ್ ಕಮಿಶನ್‌ನ ಉಪಾಧ್ಯಕ್ಷ ಶರತ್ ಕಮಲ್ ಮತ್ತು ಓರ್ವ ಮಹಿಳಾ ವಕೀಲರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿದೆ.