×
Ad

ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ಲೂಯಿಸ್ ಸುವಾರೆಝ್ ವಿದಾಯ

Update: 2024-09-03 21:42 IST

 ಲೂಯಿಸ್ ಸುವಾರೆಝ್ | PC : X 

ಹೊಸದಿಲ್ಲಿ : ಉರುಗ್ವೆ ಫುಟ್ಬಾಲ್ ತಂಡದ ಫಾರ್ವರ್ಡ್ ಆಟಗಾರ ಲೂಯಿಸ್ ಸುವಾರೆಝ್ ಸೋಮವಾರ ಅಂತರರಾಷ್ಟ್ರೀಯ ಕ್ರೀಡಾ ಬದುಕಿಗೆ ವಿದಾಯ ಕೋರಿದ್ದಾರೆ.

37 ವರ್ಷದ ಆಟಗಾರ ಉರುಗ್ವೆ ಪರವಾಗಿ 17 ವರ್ಷಗಳ ಕಾಲ 142 ಪಂದ್ಯಗಳಲ್ಲಿ ಆಡಿ 69 ಗೋಲುಗಳನ್ನು ಗಳಿಸಿದ್ದಾರೆ. ಅವರು ಉರುಗ್ವೆಯ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಕೆದಾರರಾಗಿ ನಿವೃತ್ತಿ ಹೊಂದಿದ್ದಾರೆ.

2007ರಲ್ಲಿ ಅಂತರರಾಷ್ಟ್ರೀಯ ಕ್ರೀಡಾ ಜೀವನ ಆರಂಭಿಸಿದ ಸುವಾರೆಝ್, 2010ರ ವಿಶ್ವಕಪ್‌ನಲ್ಲಿ ತಂಡವು ಸೆಮಿಫೈನಲ್‌ ವರೆಗೆ ತಲುಪುವಲ್ಲಿ ಮತ್ತು ಮಾರನೇ ವರ್ಷ ಕೊಪಾ ಅಮೆರಿಕ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘‘ಶುಕ್ರವಾರ ನಾನು ರಾಷ್ಟ್ರೀಯ ತಂಡದಲ್ಲಿ ಕೊನೆಯ ಬಾರಿಗೆ ಆಡುತ್ತಿದ್ದೇನೆ’’ ಎಂಬುದಾಗಿ ಸುವಾರೆಝ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

‘‘ನಿವೃತ್ತಿಗೊಳ್ಳುವ ನಿರ್ಧಾರವನ್ನು ಸ್ವತಃ ನಾನೇ ತೆಗೆದುಕೊಂಡಿದ್ದೇನೆ. ನಾನು ಗಾಯದಿಂದಾಗಿ ಅಥವಾ ಅವಕಾಶಗಳ ಕೊರತೆಯಿಂದಾಗಿ ನಿವೃತ್ತನಾಗುತ್ತಿಲ್ಲ. ಇದು ನನಗೆ ತೃಪ್ತಿ ತಂದಿದೆ’’ ಎಂದು ಅವರು ಹೇಳಿದರು.

2026ರ ವಿಶ್ವಕಪ್‌ಗಾಗಿ ಶುಕ್ರವಾರ ಮೋಂಟೆವಿಡಿಯೊದ ಸೆಂಟನಾರಿಯೊ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ದಕ್ಷಿಣ ಅಮೆರಿಕ ತಂಡಗಳ ಅರ್ಹತಾ ಸುತ್ತಿನ ಪಂದ್ಯದಲ್ಲಿ ಉರುಗ್ವೆ ತಂಡವು ಪರಾಗ್ವೆ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News