×
Ad

ರಣಜಿ: ಮಹಾರಾಷ್ಟ್ರ 200-6; 113 ರನ್ ಮೊದಲ ಇನಿಂಗ್ಸ್ ಹಿನ್ನಡೆ

ಶ್ರೇಯಸ್ ಗೋಪಾಲ್ ಅರ್ಧ ಶತಕ; ಕರ್ನಾಟಕ ಮೊದಲ ಇನಿಂಗ್ಸ್ 313

Update: 2025-11-09 21:14 IST

Photo Credit : X

ಪುಣೆ, ನ. 9: ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡವು ರವಿವಾರ ತನ್ನ ಮೊದಲ ಇನಿಂಗ್ಸ್‌ನಲ್ಲಿ 313 ರನ್‌ ಗಳನ್ನು ಗಳಿಸಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್‌ ನಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ರವಿವಾರ ಶ್ರೇಯಸ್ ಗೋಪಾಲ್ (71) ಅರ್ಧ ಶತಕ ಬಾರಿಸಿದರು. ರವಿವಾರ ಕರ್ನಾಟಕದ ಪಾಲಿಗೆ ಅದೊಂದೇ ಮಹತ್ವದ ಘಟನೆಯಾಯಿತು. ಉಳಿದಂತೆ ಕೆಳ ಕ್ರಮಾಂಕದ ಬ್ಯಾಟರ್‌ ಗಳು ಮಹಾರಾಷ್ಟ್ರ ಬೌಲರ್‌ ಗಳ ಉರಿ ದಾಳಿಗೆ ಕಂಗಾಲಾಗಿ ಕ್ಷಿಪ್ರ ನಿರ್ಗಮನ ಕಂಡರು. ಮೂವರು ಬ್ಯಾಟರ್‌ ಗಳು ಶೂನ್ಯಕ್ಕೆ ವಾಪಸಾದರೆ, ಕೊನೆ ಕ್ರಮಾಂಕದ ಬ್ಯಾಟರ್ ಖಾತೆ ತೆರೆಯದೇ ಅಜೇಯವಾಗಿ ಉಳಿದರು.

ಮುನ್ನಾ ದಿನದ ಮೊತ್ತ 5 ವಿಕೆಟ್‌ ಗಳ ನಷ್ಟಕ್ಕೆ 257 ರನ್ ಇದ್ದಲ್ಲಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ಬ್ಯಾಟರ್‌ ಗಳಿಗೆ ರವಿವಾರ ಕೇವಲ 56 ರನ್‌ ಗಳನ್ನು ಸೇರಿಸಲು ಸಾಧ್ಯವಾಯಿತು. ಅಂದರೆ ಕೊನೆಯ ಐದು ವಿಕೆಟ್‌ ಗಳು 56 ರನ್‌ ಗಳಿಗೆ ಉರುಳಿದವು.

ಮಹಾರಾಷ್ಟ್ರದ ಪರವಾಗಿ ಜಲಜ್ ಸಕ್ಸೇನ 4, ಮುಕೇಶ್ ಚೌಧರಿ 3 ಮತ್ತು ವಿಕಿ ಒಸ್ವಾಲ್ 2 ವಿಕೆಟ್‌ ಗಳನ್ನು ಪಡೆದರು.

ಬಳಿಕ ಮಹಾರಾಷ್ಟ್ರ ತನ್ನ ಮೊದಲ ಇನಿಂಗ್ಸ್‌ನಲ್ಲಿ, ಎರಡನೇ ದಿನದಾಟದ ಮುಕ್ತಾಯದ ವೇಳೆಗೆ 6 ವಿಕೆಟ್‌ ಗಳ ನಷ್ಟಕ್ಕೆ 200 ರನ್‌ ಗಳನ್ನು ಗಳಿಸಿದೆ.

ಅದು ಈಗ 113 ರನ್‌ ಗಳ ಮೊದಲ ಇನಿಂಗ್ಸ್ ಹಿನ್ನಡೆಯಲ್ಲಿದೆ.

ಮಹಾರಾಷ್ಟ್ರದ ಪರವಾಗಿ ಆರಂಭಿಕ ಬ್ಯಾಟರ್ ಪೃಥ್ವಿ ಶಾ (71) ಅರ್ಧ ಶತಕವನ್ನು ಸಿಡಿಸಿದರು. ಇನ್ನೋರ್ವ ಆರಂಭಿಕ ಬ್ಯಾಟರ್ ಅರ್ಶಿನ್ ಕುಲಕರ್ಣಿ 34 ರನ್‌ ಗಳ ದೇಣಿಗೆ ನೀಡಿದರು. ಅವರಿಬ್ಬರು ಮೊದಲ ಇನಿಂಗ್ಸ್‌ಗೆ 98 ರನ್‌ ಗಳನ್ನು ಸೇರಿಸಿದರು.

ಬಳಿಕ ಸಚಿನ್ ದಾಸ್ (21) ಮತ್ತು ಸೌರಭ್ ನವಾಲೆ (26) ಇನಿಂಗ್ಸ್ ಆಧರಿಸಿದರು.

ಜಲಜ್ ಸಕ್ಸೇನ (34) ಮತ್ತು ವಿಕಿ ಒಸ್ವಾಲ್ (4) ಕ್ರೀಸ್‌ನಲ್ಲಿದ್ದಾರೆ.

ಕರ್ನಾಟಕದ ಪರವಾಗಿ ಶ್ರೇಯಸ್ ಗೋಪಾಲ್ ನಿಖರ ಬೌಲಿಂಗ್ ದಾಳಿ ನಡೆಸಿದರು. ಅವರು 46 ರನ್‌ ಗಳನ್ನು ಕೊಟ್ಟು ನಾಲ್ಕು ವಿಕೆಟ್‌ ಗಳನ್ನು ಪಡೆದರು. ಮೊಹ್ಸಿನ್ ಖಾನ್ ಎರಡು ವಿಕೆಟ್‌ ಗಳನ್ನು ಉರುಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News