ಮಲೇಶ್ಯ ಮಾಸ್ಟರ್ಸ್ | ಆರು ವರ್ಷಗಳ ನಂತರ ಮೊದಲ ಬಾರಿ ಶ್ರೀಕಾಂತ್ ಫೈನಲ್ ಗೆ
ಶ್ರೀಕಾಂತ್ | PC : PTI
ಕೌಲಾಲಂಪುರ: ಮಲೇಶ್ಯ ಮಾಸ್ಟರ್ಸ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಶನಿವಾರ ಜಪಾನಿನ ಯೂಶಿ ಟನಕಾರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿರುವ ಶ್ರೀಕಾಂತ್ ಆರು ವರ್ಷಗಳ ನಂತರ ಮೊದಲ ಬಾರಿ ಬಿಡಬ್ಲ್ಯುಎಫ್ ಸ್ಪರ್ಧೆಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
32ರ ಹರೆಯದ, 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ರೋಚಕವಾಗಿ ಸಾಗಿದ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.23ನೇ ಆಟಗಾರ ಟನಕಾರನ್ನು 21-18, 24-22 ಗೇಮ್‌ಗಳ ಅಂತರದಿಂದ ಮಣಿಸಿದರು.
ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹೈದರಾಬಾದ್ ಆಟಗಾರ ಚೀನಾದ 2ನೇ ಶ್ರೇಯಾಂಕದ ಲಿ ಶಿ ಫೆಂಗ್ ಅವರನ್ನು ಎದುರಿಸಲಿದ್ದಾರೆ.
2019ರ ಇಂಡಿಯಾ ಓಪನ್ ನಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಗೆದ್ದ ನಂತರ ಶ್ರೀಕಾಂತ್ ಅವರು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವದ ಮಾಜಿ ನಂ.1 ಆಟಗಾರ ಹಾಗೂ ಸದ್ಯ 65ನೇ ರ‍್ಯಾಂನ ಶ್ರೀಕಾಂತ್ ಅವರು ಫಾರ್ಮ್ ಹಾಗೂ ಫಿಟ್ನೆಸ್ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಳಪೆ ಫಾರ್ಮ್‌ನಲ್ಲಿದ್ದರು.
‘‘ದೈಹಿಕವಾಗಿ ನಾನೀಗ ಚೆನ್ನಾಗಿದ್ದೇನೆ, ಆದರೆ ಕಳೆದ ವರ್ಷ ನಾನು ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ, ಕ್ವಾಲಿಫೈಯರ್ ಪಂದ್ಯದಲ್ಲಿ ಆಡಿ ಸೋತಿರುವುದು ನನ್ನ ಪಂದ್ಯಗಳ ಮೇಲೆ ಪ್ರಭಾವಬೀರಿದೆ. ನಾನು ಕಳೆದ ತಿಂಗಳು ಕಠಿಣ ಪರಿಶ್ರಮಪಟ್ಟಿದ್ದೆ. ನಾನು ದೀರ್ಘ ಸಮಯದ ನಂತರ ಈ ಗೆಲುವು ದಾಖಲಿಸಿದ್ದರಿಂದ ಭಾವುಕನಾಗಿದ್ದೇನೆ’’ಎಂದು ಶ್ರೀಕಾಂತ್ ನುಡಿದರು.
ಶ್ರೀಕಾಂತ್ 2017ರಲ್ಲಿ ನಾಲ್ಕು ಬಿಡಬ್ಲ್ಯುಎಫ್ ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಮೊದಲ ಆಟಗಾರನಾಗಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಟೀಮ್ ಸ್ಪರ್ಧೆಯಲ್ಲಿ ಭಾರತ ತಂಡಕ್ಕೆ ಮೊತ್ತ ಮೊದಲ ಚಿನ್ನದ ಪದಕ ಗೆಲ್ಲಲು ನೇತೃತ್ವವಹಿಸಿದ್ದರು.
ಆದರೆ ಆನಂತರ ಶ್ರೀಕಾಂತ್ ಪರದಾಟ ನಡೆಸಲಾರಂಭಿಸಿದರು.2019ರಲ್ಲಿ ಉತ್ತಮ ಟಚ್ ನಲ್ಲಿದ್ದಂತೆ ಕಂಡುಬಂದರು. ಗಾಯದ ಸಮಸ್ಯೆಗಳ ಕಾರಣ ಟೋಕಿಯೊ ಒಲಿಂಪಿಕ್ಸ್‌ನಿಂದ ವಂಚಿತರಾಗಿದ್ದರು. ಕೋವಿಡ್-19 ಕಾರಣ ಅರ್ಹತಾ ಪಂದ್ಯಗಳು ರದ್ದಾಗಿದ್ದವು.
ವಿಶೇಷವಾಗಿ ಪಾದದ ಗಾಯಗಳಿಗೆ ಸಂಬಂಧಿಸಿದ ಗಾಯಗಳು ಸೇರಿದಂತೆ ಸಣ್ಣಪುಟ್ಟ ಗಾಯಗಳಿಂದ ಬಳಲುತ್ತಿದ್ದರು. ಇದು ಅವರ ಸ್ಥಿರ ಪ್ರದರ್ಶನದ ಮೇಲೆ ಪರಿಣಾಮಬೀರಿದೆ. ಸಮಯಕ್ಕೆ ಸರಿಯಾಗಿ ಚೇತರಿಸಿಕೊಂಡಿರುವ ಶ್ರೀಕಾಂತ್ ಸ್ಪೇನ್ ನಲ್ಲಿ ನಡೆದ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಗೆ ತಲುಪಿದ ಭಾರತದ ಮೊದಲ ಪುರುಷ ಶಟ್ಲರ್ ಎನಿಸಿಕೊಂಡಿದ್ದಾರೆ.
2022ರಲ್ಲಿ ಭಾರತದ ಐತಿಹಾಸಿಕ ಥಾಮಸ್ ಕಪ್ ಗೆಲುವಿನಲ್ಲಿ ಶ್ರೀಕಾಂತ್ ಪ್ರಮುಖ ಪಾತ್ರವಹಿಸಿದ್ದರು.
ಶ್ರೀಕಾಂತ್ ಈ ವರ್ಷಾರಂಭದಲ್ಲಿ ಥಾಯ್ಲೆಂಡ್ ಓಪನ್ ಸೂಪರ್-300 ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ತಲುಪಿದ್ದರು. 2023ರಲ್ಲಿ ಸ್ವಿಸ್ ಓಪನ್ ಹಾಗೂ ಮಕಾವು ಓಪನ್ ನಲ್ಲಿ ಕೊನೆಯ ಬಾರಿ ಸೆಮಿ ಫೈನಲ್ ಗೆ ತಲುಪಿದ್ದರು.
ಕಳೆದ 3 ತಿಂಗಳುಗಳಿಂದ ಶ್ರೀಕಾಂತ್ ತೀವ್ರ ತರಬೇತಿಯಲ್ಲಿ ನಿರತರಾಗಿದ್ದು, ಫಿಟ್ನೆಸ್ ನತ್ತ ಹೆಚ್ಚು ಗಮನ ಹರಿಸಿದ್ದಾರೆ. ಕೋಚ್‌ಗಳಾದ ಗುರುಸಾಯಿದತ್ತ ಹಾಗೂ ಪಿ.ಕಶ್ಯಪ್ ಅವರ ಹದ್ದಿನಕಣ್ಣಿನಡಿ ಕಠಿಣ ತರಬೇತಿ ನಡೆಸಿದ್ದಾರೆ.