×
Ad

ಮಲೇಶ್ಯ ಮಾಸ್ಟರ್ಸ್ | ಕಿಡಂಬಿ ಶ್ರೀಕಾಂತ್ ಸೆಮಿ ಫೈನಲ್‌ ಗೆ ಲಗ್ಗೆ

Update: 2025-05-23 21:11 IST

ಕಿಡಂಬಿ ಶ್ರೀಕಾಂತ್ | PC : NDTV  

ಕೌಲಾಲಂಪುರ: ತೀವ್ರ ಪೈಪೋಟಿಯಿಂದ ಕೂಡಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟೊಮಾ ಜೂನಿಯರ್ ಪೊಪೊವ್‌ ರನ್ನು ಮಣಿಸಿರುವ ಕಿಡಂಬಿ ಶ್ರೀಕಾಂತ್ 2025ರ ಆವೃತ್ತಿಯ ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿ ಫೈನಲ್‌ ಗೆ ಪ್ರವೇಶಿಸಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ ನಲ್ಲಿ ಸದ್ಯ 65ನೇ ಸ್ಥಾನದಲ್ಲಿರುವ ವಿಶ್ವದ ಮಾಜಿ ನಂ.1 ಆಟಗಾರ ಶ್ರೀಕಾಂತ್ ಮೊದಲ ಗೇಮ್ ಅನ್ನು 24-22 ಅಂತರದಿಂದ ಗೆದ್ದುಕೊಂಡರು. ಎರಡನೇ ಗೇಮ್ ಅನ್ನು 21-17 ಅಂತರದಿಂದ ಗೆದ್ದುಕೊಂಡಿರುವ ಪೊಪೊವ್ ತಿರುಗೇಟು ನೀಡಿದರು. ರೋಚಕವಾಗಿ ಸಾಗಿದ ಮೂರನೇ ಗೇಮ್‌ನಲ್ಲಿ ಶ್ರೀಕಾಂತ್ 22-20 ಅಂತರದಿಂದ ಜಯ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡರು. ಪಂದ್ಯವು ಒಂದು ಗಂಟೆ, 14 ನಿಮಿಷಗಳ ಕಾಲ ನಡೆಯಿತು.

32ರ ಹರೆಯದ ಶ್ರೀಕಾಂತ್ ಶನಿವಾರ ನಡೆಯಲಿರುವ ಸೆಮಿ ಫೈನಲ್ ನಲ್ಲಿ ಜಪಾನಿನ ಯುಶಿ ಟನಕ ಅವರನ್ನು ಎದುರಿಸಲಿದ್ದಾರೆ. ಟನಕ ಇದಕ್ಕೂ ಮೊದಲು ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಎಚ್.ಎಸ್.ಪ್ರಣಯ್ ಅವರನ್ನು ಸೋಲಿಸಿದ್ದರು. ಆ ನಂತರ ಕ್ವಾರ್ಟರ್ ಫೈನಲ್ ನಲ್ಲಿ ಟೋಮಾ ಜೂನಿಯರ್ ಸಹೋದರ ಕ್ರಿಸ್ಟೊ ಪೊಪೊವ್‌ರನ್ನು 21-18, 16-21, 21-6 ಅಂತರದಿಂದ ಸೋಲಿಸಿದರು.

ಇನ್ನೊಂದು ಪುರುಷರ ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ 4ನೇ ಶ್ರೇಯಾಂಕದ ಜಪಾನಿನ ಕೊಡೈ ನರಯೊಕಾ ಚೀನಾದ ಲಿ ಶಿ ಫೆಂಗ್‌ರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್ ಜೋಡಿ ಧ್ರುವ ಕಪಿಲಾ ಹಾಗೂ ತನಿಶಾ ಕ್ರಾಸ್ಟೊ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಸೋತು ನಿರ್ಗಮಿಸಿದ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್-500 ಪಂದ್ಯಾವಳಿಯಲ್ಲಿ ಶ್ರೀಕಾಂತ್ ಮಾತ್ರ ಸ್ಪರ್ಧೆಯಲ್ಲಿರುವ ಭಾರತೀಯ ಕ್ರೀಡಾಪಟುವಾಗಿದ್ದಾರೆ.

ಕಪಿಲಾ ಹಾಗೂ ಕ್ರಾಸ್ಟೊ 35 ನಿಮಿಷಗಳ ಕಾಲ ನಡೆದ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕದ ಚೀನಾದ ಜಿಯಾಂಗ್ ಝೆನ್ ಬಾಂಗ್ ಹಾಗೂ ವೀ ಯಾ ಕ್ಸಿನ್ ಅವರ ವಿರುದ್ಧ 22-24, 13-21 ಅಂತರದಿಂದ ಸೋತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News