ಇಂಗ್ಲೆಂಡ್ ವಿರುದ್ಧ ವೇಗದ ಅರ್ಧಶತಕ ಗಳಿಸಿ ದಾಖಲೆ ನಿರ್ಮಿಸಿದ ಮರ್ಕ್ರಮ್
ಏಡೆನ್ ಮರ್ಕ್ರಮ್ | PC : X
ಲೀಡ್ಸ್, ಸೆ.3: ದಕ್ಷಿಣ ಆಫ್ರಿಕಾದ ಉಪ ನಾಯಕ ಏಡೆನ್ ಮರ್ಕ್ರಮ್ ಲೀಡ್ಸ್ ನ ಹೆಡ್ಡಿಂಗ್ಲೆಯಲ್ಲಿ ಮಂಗಳವಾರ ನಡೆದ ಇಂಗ್ಲೆಂಡ್ ಕ್ರಿಕೆಟ್ ತಂಡ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 23 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿ ಇತಿಹಾಸ ನಿರ್ಮಿಸಿದರು.
ಬಲಗೈ ಬ್ಯಾಟರ್ ಮರ್ಕ್ರಮ್ ವೇಗದ ಬೌಲರ್ ಸೋನಿ ಬೇಕರ್‌ರನ್ನು ಗುರಿಯಾಗಿಸಿ ಬ್ಯಾಟ್ ಬೀಸಿದರು. 7 ವಿಕೆಟ್ ಗಳಿಂದ ಸುಲಭ ಗೆಲುವು ಪಡೆದ ದಕ್ಷಿಣ ಆಫ್ರಿಕಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
132 ರನ್ ಚೇಸ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಕೇವಲ 6 ಓವರ್ ಗಳಲ್ಲಿ 50 ರನ್ ಗಳಿಸಿತು. ಏಕದಿನ ಇತಿಹಾಸದಲ್ಲಿ ವೇಗವಾಗಿ 50 ರನ್ ಗಳಿಸಿತು. ಇಂಗ್ಲೆಂಡ್ ವಿರುದ್ಧ ವೇಗದ ಅರ್ಧಶತಕ ಗಳಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಎನಿಸಿಕೊಂಡ ಮರ್ಕ್ರಮ್ ಹೊಸ ದಾಖಲೆ ನಿರ್ಮಿಸಿದರು.
ಜೋಹಾನ್ಸ್ ಬರ್ಗ್ ನಲ್ಲಿ 2016ರಲ್ಲಿ 30 ಎಸೆತಗಳಲ್ಲಿ ಮೈಲಿಗಲ್ಲು ತಲುಪಿದ್ದ ಕ್ರಿಸ್ ಮೊರಿಸ್ ದಾಖಲೆಯನ್ನು ಮುರಿದಿದ್ದಾರೆ.
ಬೇಕರ್ ಎಸೆದ ಮೊದಲ ಓವರ್ ನಲ್ಲಿ 3 ಬೌಂಡರಿಗಳನ್ನು ಬಾರಿಸಿದ ಮರ್ಕ್ರಮ್ ತನ್ನ ಉದ್ದೇಶ ಸ್ಪಷ್ಟಪಡಿಸಿದ್ದರು. 2ನೇ ಓವರ್ ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಗಳಿಸಿ ಇಂಗ್ಲೆಂಡ್ ಮೇಲೆ ಸವಾರಿ ಮಾಡಿದರು.
ಮರ್ಕಮ್ ಅವರು ರಿಕೆಲ್ಟನ್ ಜೊತೆಗೂಡಿ 2016ರ ನಂತರ ದಕ್ಷಿಣ ಆಫ್ರಿಕಾ ಪರ ಮೊದಲ ವಿಕೆಟ್‌ಗೆ 100ಕ್ಕೂ ಅಧಿಕ ಜೊತೆಯಾಟ ನಡೆಸಿದರು. 2016ರಲ್ಲಿ ಸೆಂಚೂರಿಯನ್‌ನಲ್ಲಿ ಹಾಶಿಮ್ ಅಮ್ಲ ಹಾಗೂ ಕ್ವಿಂಟನ್ ಡಿಕಾಕ್ ಇಂಗ್ಲೆಂಡ್ ವಿರುದ್ಧ ಮೊದಲ ವಿಕೆಟ್‌ಗೆ 239 ರನ್ ಜೊತೆಯಾಟ ನಡೆಸಿದ್ದರು.
ಮರ್ಕ್ರಮ್ 55 ಎಸೆತಗಳಲ್ಲಿ 86 ರನ್ ಕಲೆ ಹಾಕಿ ಆದಿಲ್ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾವು 187 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಇದಕ್ಕೂ ಮೊದಲು 25 ಓವರ್ ಗಳಲ್ಲಿ ಕೇವಲ 131 ರನ್ ಗಳಿಸಿ ಆಲೌಟಾಗಿದ್ದ ಇಂಗ್ಲೆಂಡ್ ತಂಡವು ಏಕದಿನ ಕ್ರಿಕೆಟ್!ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಕನಿಷ್ಠ ಮೊತ್ತ ಗಳಿಸಿತು. ಇಂಗ್ಲೆಂಡ್‌ನ 6 ಬ್ಯಾಟರ್‌ಗಳು ಒಂದಂಕಿ ಗಳಿಸಿ ಔಟಾದರು. ಕೇಶವ ಮಹಾರಾಜ್ ನೇತೃತ್ವದ ದಕ್ಷಿಣ ಆಫ್ರಿಕಾದ ಬೌಲರ್‌ಗಳ ದಾಳಿ ಎದುರು ಸಂಪೂರ್ಣ ವೈಫಲ್ಯ ಕಂಡಿತು.