ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದ ಮಿಚೆಲ್ ಮಾರ್ಷ್
ಮಿಚೆಲ್ ಮಾರ್ಷ್ | PTI
ಹೊಸದಿಲ್ಲಿ: ಬೆನ್ನುನೋವಿನಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳುವಲ್ಲಿ ವಿಫಲರಾಗಿರುವ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ.
ಮಾರ್ಷ್ ಭಾರತೀಯ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಆಡುವುದು ಅನುಮಾನವಾಗಿದೆ.
ಪಾಕಿಸ್ತಾನ ಹಾಗೂ ದುಬೈನಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರ ತನಕ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಾರ್ಷ್ ಭಾಗವಹಿಸುವುದಿಲ್ಲ. ಮಾರ್ಷ್ ಅವರು ಐಪಿಎಲ್‌ನಲ್ಲಿ ಆಡುವುದು ಅನುಮಾನ ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ಪ್ರಕಟಿಸಿದೆ.
ಮಾರ್ಷ್ ಅವರು ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಲಾಗಿರುವ 15 ಸದಸ್ಯರ ತಂಡದಲ್ಲಿ ಆಲ್‌ರೌಂಡರ್‌ಗಳಾದ ಆ್ಯರೊನ್ ಹಾರ್ಡಿ, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಮಾರ್ಕಸ್ ಸ್ಟೋಯಿನಿಸ್‌ರೊಂದಿಗೆ ಸ್ಥಾನ ಪಡೆದಿದ್ದರು. ರಾಷ್ಟ್ರೀಯ ಆಯ್ಕೆ ಸಮಿತಿಯು ಶೀಘ್ರವೇ ಬದಲಿ ಆಟಗಾರನನ್ನು ನೇಮಿಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅಂತಿಮ ತಂಡಗಳನ್ನು ಫೆ.12ರೊಳಗೆ ಆಯ್ಕೆ ಮಾಡಬೇಕಾಗಿದೆ ಎಂದು ಸಿಎ ತಿಳಿಸಿದೆ.
ಲಕ್ನೊ ಸೂಪರ್ ಜೈಂಟ್ಸ್ ತಂಡವು ಮಾ.23ರಿಂದ ಆರಂಭವಾಗಲಿರುವ 2025ರ ಐಪಿಎಲ್ ಟೂರ್ನಿಗೆ 33ರ ಹರೆಯದ ಮಾರ್ಷ್‌ರೊಂದಿಗೆ ಸಹಿ ಹಾಕಿದೆ.
ಇತ್ತೀಚೆಗೆ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4 ಪಂದ್ಯಗಳಲ್ಲಿ ಆಡಿದ್ದ ಮಾರ್ಷ್ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. 7 ಇನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಎರಡಂಕೆಯ ಸ್ಕೋರ್ ಗಳಿಸಿದ್ದರು. ಬಲಗೈ ಮಧ್ಯಮ ವೇಗಿ ಪ್ರಮುಖ ವೇಗದ ಬೌಲರ್‌ಗಳ ಕೆಲಸದ ಒತ್ತಡವನ್ನು ತಗ್ಗಿಸುವಲ್ಲಿಯೂ ವಿಫಲರಾಗಿದ್ದರು.