×
Ad

ಮೊದಲ ಬಾಲ್ ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಪಡೆದು ಸೇಡು ತೀರಿಸಿಕೊಂಡ ಮಿಚೆಲ್ ಸ್ಟಾರ್ಕ್!

Update: 2024-12-06 11:12 IST

ಮಿಚೆಲ್ ಸ್ಟಾರ್ಕ್ (Photo: PTI)

ಅಡಿಲೇಡ್: ಇಲ್ಲಿನ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ತಂಡಗಳ ನಡುವಿನ ಎರಡನೆ ಟೆಸ್ಟ್ ಪಂದ್ಯದ ಮೊದಲ ಬಾಲ್ ನಲ್ಲೇ ಭಾರತದ ಬ್ಯಾಟರ್ ಯಶಸ್ವಿ ಜೈಸ್ವಾಲ್ ರ ವಿಕೆಟ್‌ ಪಡೆಯುವ ಮೂಲಕ, ಆಸ್ಟ್ರೇಲಿಯ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಸೇಡು ತೀರಿಸಿಕೊಂಡರು. ಪ್ರಥಮ ಟೆಸ್ಟ್ ಪಂದ್ಯದ ವೇಳೆ ಈ ಇಬ್ಬರು ಆಟಗಾರರ ನಡುವೆ ನಡೆದಿದ್ದ ಮಾತಿನ ಚಕಮಕಿಯ ಸಂದರ್ಭದಲ್ಲಿ, “ನೀವು ತುಂಬಾ ನಿಧಾನವಾಗಿ ಬೌಲ್ ಮಾಡುತ್ತೀರಿ” ಎಂದು ಮಿಚೆಲ್ ಸ್ಟಾರ್ಕ್ ರನ್ನು ಯಶಸ್ವಿ ಜೈಸ್ವಾಲ್ ಅಣಕಿಸಿದ್ದರು.

ಮಿಚೆಲ್ ಸ್ಟಾರ್ಕ್ ಎಸೆದ ಸ್ವಿಂಗ್ ಬಾಲನ್ನು ಫ್ಲಿಕ್ ಮಾಡುವ ಪ್ರಯತ್ನದಲ್ಲಿ, ಬಾಲಿನ ಗತಿಯನ್ನು ಅಂದಾಜಿಸುವಲ್ಲಿ ವಿಫಲಗೊಂಡ ಯಶಸ್ವಿ ಜೈಸ್ವಾಲ್, ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.

ಪರ್ತ್ ನಲ್ಲಿ ನಡೆದಿದ್ದ ಪ್ರಥಮ ಟೆಸ್ಟ್ ಪಂದ್ಯದ ಎರಡನೆ ಇನಿಂಗ್ಸ್ ವೇಳೆ ಸ್ಟಾರ್ಕ್ ಎಸೆದ ಬಾಲನ್ನು ಜೈಸ್ವಾಲ್ ಬೌಂಡರಿಗೆ ಡ್ರೈವ್ ಮಾಡಿದ್ದರು. ನಂತರದ ಬಾಲನ್ನು ರಕ್ಷಣಾತ್ಮಕವಾಗಿ ಆಡಿದ್ದ ಜೈಸ್ವಾಲ್, “ಬಾಲು ತುಂಬಾ ನಿಧಾನಕ್ಕೆ ಬರುತ್ತಿದೆ” ಎಂದು ಸ್ಟಾರ್ಕ್ ರನ್ನುದ್ದೇಶಿಸಿ ಅಣಕಿಸಿದ್ದರು. ಈ ಹೇಳಿಕೆ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿತ್ತು. ಆದರೆ, ಜೈಸ್ವಾಲ್ ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳದ ಸ್ಟಾರ್ಕ್, ಅವರತ್ತ ಮುಗುಳ್ನಕ್ಕು ಮತ್ತೆ ಬೌಲಿಂಗ್ ಮಾಡಲು ತೆರಳಿದ್ದರು.

ಈ ಕುರಿತು cricket.com.auನೊಂದಿಗೆ ಮಾತನಾಡಿದ್ದ ಸ್ಟಾರ್ಕ್, “ನಾನು ನಿಧಾನವಾಗಿ ಬೌಲಿಂಗ್ ಮಾಡುತ್ತಿದ್ದೇನೆ ಎಂದು ಆತ ಹೇಳಿದ್ದು ನನಗೆ ಕೇಳಿಸಲಿಲ್ಲ. ನಾನು ಇತ್ತೀಚೆಗೆ ಜನರೊಂದಿಗೆ ಹೆಚ್ಚು ವಾದಿಸಲು ಹೋಗುವುದಿಲ್ಲ. ನಾನು ಮೊದಲು ಹಾಗೆಲ್ಲ ಮಾಡುತ್ತಿದ್ದೆ. ಆದರೆ, ಈಗ ಹೊಂದಿಕೊಂಡು ಹೋಗುತ್ತೇನೆ. ನನ್ನ ಮುಂಚಿನ ಬಾಲನ್ನು ಫ್ಲಿಕ್ ಮಾಡಿದ್ದ ಜೈಸ್ವಾಲ್, ಮತ್ತೆ ಅಂತಹುದೇ ಬಾಲನ್ನು ಎಸೆದಾಗ, ರಕ್ಷಣಾತ್ಮಕವಾಗಿ ಆಡಿದರು. ಆಗ ನಾನು, ಎಲ್ಲಿ ಫ್ಲಿಕ್ ಹೊಡೆತ ಎಂದು ಆತನನ್ನು ಪ್ರಶ್ನಿಸಿದೆ. ಅದಕ್ಕಾತ ಮುಗುಳ್ನಗೆ ಬೀರಿದ. ನಾವದನ್ನು ಅಲ್ಲಿಗೇ ಮುಕ್ತಾಯಗೊಳಿಸಿದೆವು” ಎಂದು ಹೇಳಿಕೊಂಡಿದ್ದರು.

ಇತ್ತೀಚಿನ ವರದಿಗಳ ಪ್ರಕಾರ, ಭಾರತ ತಂಡ 2 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿದೆ.  ಕೆ.ಎಲ್.ರಾಹುಲ್ 37 ರನ್ ಗಳಿಸಿ ಔಟಾದರು. 30 ರನ್ ಗಳಿಸಿರುವ ಶುಭಮನ್ ಗಿಲ್ ಕ್ರೀಸಿನಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News