ಬಿಸಿಸಿಐ ಅಧ್ಯಕ್ಷರಾಗಿ ಮಿಥುನ್ ಮನ್ಹಾಸ್ ಅವಿರೋಧ ಆಯ್ಕೆ
ಮಿಥುನ್ ಮನ್ಹಾಸ್ (Photo: X)
ಹೊಸದಿಲ್ಲಿ, ಸೆ. 28: ದಿಲ್ಲಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ರವಿವಾರ ನಡೆದ ಬಿಸಿಸಿಐನ ವಾರ್ಷಿಕ ಮಹಾಸಭೆ(ಎಜಿಎಂ)ಯಲ್ಲಿ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
45ರ ವಯಸ್ಸಿನ ಮಿಥುನ್ ಕ್ರಿಕೆಟ್ ಮಂಡಳಿಯ 37ನೇ ಅಧ್ಯಕ್ಷರಾಗಿದ್ದು, ಕಳೆದ ತಿಂಗಳು 70ನೇ ವಯಸ್ಸಿಗೆ ಕಾಲಿಟ್ಟ ನಂತರ ರಾಜೀನಾಮೆ ನೀಡಿದ್ದ ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಹೊಸದಿಲ್ಲಿಯಲ್ಲಿ ಈ ತಿಂಗಳಾರಂಭದಲ್ಲಿ ನಡೆದಿದ್ದ ಬಿಸಿಸಿಐನ ಮುಖ್ಯ ಸಭೆಯಲ್ಲಿ ದೇಶೀಯ ಕ್ರಿಕೆಟಿನಲ್ಲಿ ಮಿಂಚಿದ್ದ ಮಿಥುನ್‌ರನ್ನು ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಅಯ್ಕೆ ಮಾಡಲು ನಿರ್ಧರಿಸಲಾಗಿತ್ತು. ಮಿಥುನ್ ಅವರ ನಾಮನಿರ್ದೇಶನವನ್ನು ಜಮ್ಮು-ಕಾಶ್ಮೀರ ಕ್ರಿಕೆಟ್ ಸಂಸ್ಥೆ(ಜೆಕೆಸಿಎ)ಪ್ರಬಲವಾಗಿ ಬೆಂಬಲಿಸಿತ್ತು.
ಮಾಜಿ ಮಧ್ಯಮ ಸರದಿಯ ಬ್ಯಾಟರ್ ಮಿಥುನ್ 1997-98 ರಿಂದ 2016-17ರ ತನಕ 157 ಪ್ರಥಮ ದರ್ಜೆ, 130 ಲಿಸ್ಟ್ ಎ ಹಾಗೂ 55 ಐಪಿಎಲ್ ಪಂದ್ಯಗಳನ್ನು ಆಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 45.82ರ ಸರಾಸರಿಯಲ್ಲಿ 27 ಶತಕ ಹಾಗೂ 49 ಅರ್ಧಶತಕಗಳ ಸಹಿತ ಒಟ್ಟು 9,714 ರನ್ ಗಳಿಸಿದ್ದಾರೆ.
ಮಿಥುನ್ ಮೂರು ಐಪಿಎಲ್ ಫ್ರಾಂಚೈಸಿಗಳಾದ-ಡೆಲ್ಲಿ ಡೇರ್ ಡೆವಿಲ್ಸ್, ಪುಣೆ ವಾರಿಯರ್ಸ್ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ಗಳನ್ನು ಪ್ರತಿನಿಧಿಸಿದ್ದು, 55 ಪಂದ್ಯಗಳಲ್ಲಿ ಒಟ್ಟು 514 ರನ್ ಗಳಿಸಿದ್ದರು. ನಿವೃತ್ತಿಯ ನಂತರ ಕೋಚ್ ಹಾಗೂ ಆಡಳಿತಗಾರನಾಗಿ ಕ್ರಿಕೆಟ್‌ನೊಂದಿಗೆ ತೊಡಗಿಸಿಕೊಂಡಿದ್ದರು.
ಮಿಥುನ್ ಅವರು ಸೌರವ್ ಗಂಗುಲಿ ಹಾಗೂ ರೋಜರ್ ಬಿನ್ನಿ ನಂತರ ಬಿಸಿಸಿಐನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೂರನೇ ಮಾಜಿ ಕ್ರಿಕೆಟಿಗನಾಗಿದ್ದಾರೆ.
ವಾರ್ಷಿಕ ಮಹಾಸಭೆಯ ವೇಳೆ ರಾಜೀವ್ ಶುಕ್ಲಾ ಹಾಗೂ ದೇವಜಿತ್ ಸೈಕಿಯಾ ಅವರು ಕ್ರಮವಾಗಿ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಪುನರಾಯ್ಕೆಯಾಗಿದ್ದಾರೆ. ರೋಹನ್ ಗೌನ್ಸ್ ಬದಲಿಗೆ ಪ್ರಭ್‌ತೇಜ್ ಸಿಂಗ್ ಜೊತೆ ಕಾರ್ಯದರ್ಶಿಯಾಗಿ, ಕರ್ನಾಟಕ ಕ್ರಿಕೆಟ್ ಸಂಸ್ಥೆಯ ರಘುರಾಮ್ ಭಟ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.