ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮಿಥುನ್ ಮನ್ಹಾಸ್ ನಾಮಪತ್ರ ಸಲ್ಲಿಕೆ
PC - ndtv
ಹೊಸದಿಲ್ಲಿ, ಸೆ.21: ದಿಲ್ಲಿ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಥುನ್ ಮನ್ಹಾಸ್ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಅಧ್ಯಕ್ಷ ಸ್ಥಾನಕ್ಕಾಗಿ ರವಿವಾರ ನಾಮಪತ್ರ ಸಲ್ಲಿಸಿದ್ದಾರೆ.
2021ರಿಂದ ಜಮ್ಮು-ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್‌ನ ಆಡಳಿತವನ್ನು ನೋಡಿಕೊಳ್ಳಲು ಬಿಸಿಸಿಐ ರಚಿಸಿರುವ ಉಪ-ಸಮಿತಿಯಲ್ಲಿ 45ರ ಹರೆಯದ ಮನ್ಹಾಸ್ ಇದ್ದಾರೆ.
“ನಾವು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಮಾಜಿ ಆಟಗಾರ ಮನ್ಹಾಸ್ ಅವರ ಹೆಸರನ್ನು ಒಮ್ಮತದಿಂದ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದೇವೆ’’ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದರು.
ಕಳೆದ ಮೂರು ವರ್ಷಗಳಿಂದ ತಾನು ಹೊಂದಿರುವ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀವ್ ಶುಕ್ಲಾ ನಾಮಪತ್ರ ಸಲ್ಲಿಸಿದ್ದಾರೆ.
ಮನ್ಹಾಸ್ ಅವರು ತಮ್ಮ 18 ವರ್ಷಗಳ ವೃತ್ತಿಜೀವನದಲ್ಲಿ 157 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 9,714 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಫ್ರಾಂಚೈಸಿ ಪರ ಆಡಿದ್ದರು. ಸದ್ಯ ಅವರು ಗುಜರಾತ್ ಟೈಟಾನ್ಸ್ ತಂಡದ ಸಹಾಯಕ ಕೋಚ್ ಆಗಿದ್ದಾರೆ.
ಶನಿವಾರ ರಾತ್ರಿ ಹೊಸದಿಲ್ಲಿಯಲ್ಲಿ ಒಟ್ಟಿಗೆ ಸೇರಿರುವ ಬಿಸಿಸಿಐ ಅಧಿಕಾರಿಗಳು, ಮನ್ಹಾಸ್ ಅವರನ್ನು ಬಿಸಿಸಿಐ ನಿರ್ಗಮನ ಅಧ್ಯಕ್ಷ ರೋಜರ್ ಬಿನ್ನಿ ಅವರ ಉತ್ತರಾಧಿಕಾರಿಯನ್ನಾಗಿ ಬಿಂಬಿಸಲು ನಿರ್ಧರಿಸಿದ್ದಾರೆ.
ಮನ್ಹಾಸ್ ಅವರೊಂದಿಗೆ ಮಾಜಿ ಟೆಸ್ಟ್ ಕ್ರಿಕೆಟಿಗ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(ಕೆಎಸ್ಸಿಎ) ರಘುರಾಮ್ ಭಟ್ ಅವರು ಖಜಾಂಚಿ ಸ್ಥಾನಕ್ಕೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಹಾಲಿ ಹಂಗಾಮಿ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಮತ್ತೊಂದು ಅವಧಿಗೆ ತನ್ನ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿರುವ ಇತರ ಸದಸ್ಯರುಗಳೆಂದರೆ: ಪ್ರಭುತೇಜ್ ಭಾಟಿಯಾ(ಜೊತೆ ಕಾರ್ಯದರ್ಶಿ), ಅರುಣ್ ಸಿಂಗ್ ಧುಮಾಲ್(ಐಪಿಎಲ್ ಆಡಳಿತ ಮಂಡಳಿಯ ಚೇರ್ಮನ್) ಹಾಗೂ ಜಯದೇವ್ ಶಾ(ಅಪೆಕ್ಸ್ ಕೌನ್ಸಿಲ್ ಸದಸ್ಯ).
ಬಿಸಿಸಿಐನ ವಾರ್ಷಿಕ ಮಹಾಸಭೆಯು ಸೆ.28ರಂದು ಮುಂಬೈನಲ್ಲಿರುವ ಮಂಡಳಿಯ ಮುಖ್ಯ ಕಚೇರಿಯಲ್ಲಿ ನಡೆಯಲಿದೆ.