×
Ad

ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಮೊರ್ನೆ ಮೊರ್ಕೆಲ್ ನೇಮಕ

Update: 2024-08-14 20:56 IST

ಗೌತಮ್ ಗಂಭೀರ್ ,  ಮೊರ್ನೆ ಮೊರ್ಕೆಲ್ | PC : BCCI 

ಹೊಸದಿಲ್ಲಿ : ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ನೆ ಮೊರ್ಕೆಲ್ ಭಾರತೀಯ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ಖಚಿತಪಡಿಸಿದ್ದಾರೆ.

ಮೊರ್ನೆ ಮೊರ್ಕೆಲ್ ಅವರು ಭಾರತದ ಪುರುಷರ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಜಯ್ ಶಾ ಪಿಟಿಐಗೆ ತಿಳಿಸಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗಿಂತ ಮೊದಲು ಮೊರ್ಕೆಲ್ ಅವರು ಭಾರತ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದ ಖ್ಯಾತ ವೇಗದ ಬೌಲರ್ ಆಗಿದ್ದ ಮೊರ್ಕೆಲ್ ಈ ಹಿಂದೆ ಐಪಿಎಲ್ ತಂಡಗಳಾದ ಲಕ್ನೊ ಸೂಪರ್ ಜಯಂಟ್ಸ್, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ನೊಂದಿಗೆ ನಂಟು ಹೊಂದಿದ್ದರು. ಲಕ್ನೊ ತಂಡದಲ್ಲಿ ಮುಖ್ಯ ಕೋಚ್ ಆಗಿದ್ದ ಗೌತಮ್ ಗಂಭೀರ್ ಜೊತೆ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಭಾರತದಲ್ಲಿ 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲೂ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದರು.

ಕಳೆದ ತಿಂಗಳು ಗೌತಮ್ ಗಂಭೀರ್ ಅವರು ಮುಖ್ಯ ಕೋಚ್ ಆಗಿ ನೇಮಕಗೊಂಡ ನಂತರ ಮೊರ್ಕೆಲ್ ರನ್ನು ಬೌಲಿಂಗ್ ಕೋಚ್ರನ್ನಾಗಿ ನೇಮಿಸಲು ಒಲವು ತೋರಿದ್ದರು.

ಗಂಭೀರ್ ಹಾಗೂ ಮೊರ್ಕೆಲ್ ಲಕ್ನೊ ತಂಡದ ಕೋಚ್ಗಳಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಗಂಭೀರ್ ಕೆಕೆಆರ್ಗೆ ಸೇರ್ಪಡೆಯಾದ ನಂತರ ಮೊರ್ಕೆಲ್ ಲಕ್ನೊ ತಂಡದಲ್ಲಿ ಉಳಿದುಕೊಂಡಿದ್ದರು.

39ರ ಹರೆಯದ ಮೊರ್ಕೆಲ್ ದಕ್ಷಿಣ ಆಫಿಕಾದ ಪರ 86 ಟೆಸ್ಟ್, 117 ಏಕದಿನ ಹಾಗೂ 44 ಟಿ20 ಪಂದ್ಯಗಳನ್ನು ಆಡಿದ್ದರು. ಒಟ್ಟು 544 ಅಂತರ್ರಾಷ್ಟ್ರೀಯ ವಿಕೆಟ್ಗಳನ್ನು ಕಬಳಿಸಿದ್ದಾರೆ. ಜಸ್ಪ್ರಿತ್ ಬುಮ್ರಾ ಸಹಿತ ವಿಶ್ವದ ಕೆಲವು ಅಗ್ರ ಬೌಲರ್ ಗಳೊಂದಿಗೆ ಕೆಲಸ ಮಾಡುವ ದೊಡ್ಡ ಜವಾಬ್ದಾರಿ ಮೊರ್ಕೆಲ್ ಮೇಲಿದೆ.

ಮೊರ್ಕೆಲ್ ಅವರ ಬೌಲಿಂಗ್ ಕೋಚ್ ಅವಧಿಯು ಸೆಪ್ಟಂಬರ್ 1ರಂದು ಆರಂಭವಾಗಲಿದೆ. ಗಂಭೀರ್ ರಂತೆಯೇ ಮೊರ್ಕೆಲ್ಗೆ ಕೂಡ 2027ರ ವಿಶ್ವಕಪ್ ತನಕ ಮೂರು ವರ್ಷಗಳ ಒಪ್ಪಂದದ ಕೊಡುಗೆ ನೀಡಲಾಗಿದೆ ಎಂದು ಸ್ಟೋರ್ಟ್ಸ್ ಸ್ಟಾರ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News