ಪ್ಲೇ ಆಫ್ ಗೆ ತೇರ್ಗಡೆಯಾಗಲು ಭರ್ಜರಿ ತಯಾರಿ; ಬೇರ್‌ಸ್ಟೊ, ಚರಿತ್ ಅಸಲಂಕ, ರಿಚರ್ಡ್ ಗ್ಲೀಸನ್‌ರನ್ನು ತಂಡಕ್ಕೆ ಸೇರಿಸಿಕೊಂಡ ಮುಂಬೈ ಇಂಡಿಯನ್ಸ್
PC : X \ @mipaltan
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಮುಂಬೈ ಇಂಡಿಯನ್ಸ್ ಹಾಲಿ ಋತುವಿನ ಉಳಿದ ಪಂದ್ಯಗಳಲ್ಲಿ ಆಲ್ ರೌಂಡರ್ ವಿಲ್ ಜಾಕ್ಸ್ ಸ್ಥಾನವನ್ನು ತುಂಬಲು ಇಂಗ್ಲೆಂಡ್ ನ ವಿಕೆಟ್‌ಕೀಪರ್ ಬ್ಯಾಟರ್ ಜಾನಿ ಬೇರ್ ಸ್ಟೋ ರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಬೇರ್‌ಸ್ಟೋ ಅವರಲ್ಲದೆ ಚರಿತ್ ಅಸಲಂಕ ಮತ್ತು ರಿಚರ್ಡ್ ಗ್ಲೀಸನ್‌ರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರಿಬ್ಬರು ಕಾರ್ಬಿನ್ ಬೋಶ್ ಮತ್ತು ರಯಾನ್ ರಿಕಲ್ಟನ್‌ರ ಸ್ಥಾನದಲ್ಲಿ ಆಡಲಿದ್ದಾರೆ. ಕಾರ್ಬಿನ್ ಮತ್ತು ರಿಕಲ್ಟನ್ ಆಸ್ಟ್ರೇಲಿಯ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಯಾರಿ ನಡೆಸುವುದಕ್ಕಾಗಿ ದಕ್ಷಿಣ ಆಫ್ರಿಕಕ್ಕೆ ತೆರಳಲಿದ್ದಾರೆ. ಮೇ 27ರ ಒಳಗೆ ಸ್ವದೇಶಕ್ಕೆ ಮರಳುವಂತೆ ಈ ಆಟಗಾರರಿಗೆ ಕ್ರಿಕೆಟ್ ಸೌತ್ ಆಫ್ರಿಕ ಮನವಿ ಮಾಡಿದೆ.
ಬೇರ್‌ಸ್ಟೋ 2019ರಲ್ಲಿ ಏಕದಿನ ವಿಶ್ವ ಕಪ್ ಗೆದ್ದ ಇಂಗ್ಲೆಂಡ ತಂಡದ ಅವಿಭಾಜ್ಯ ಅಂಗವಾಗಿದ್ದರು. ಅವರು ಇಂಗ್ಲೆಂಡ್ ಪರವಾಗಿ ಒಟ್ಟು 287 ಪಂದ್ಯಗಳನ್ನು ಆಡಿದ್ದಾರೆ.
ಅಸಲಂಕ ಪ್ರಸಕ್ತ ಶ್ರೀಲಂಕಾದ ಏಕದಿನ ಮತ್ತು ಟಿ20 ತಂಡಗಳ ನಾಯಕರಾಗಿದ್ದಾರೆ. ಅವರು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 134 ಬಾರಿ ದೇಶವನ್ನು ಪ್ರತಿನಿಧಿಸಿದ್ದಾರೆ. ಇಂಗ್ಲೆಂಡ್‌ನ ಗ್ಲೀಸನ್ ಇಂಗ್ಲೆಂಡ್ ಪರವಾಗಿ ಆರು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
ಮುಂಬೈ ಇಂಡಿಯನ್ಸ್‌ನ ಗುಂಪು ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಆಡಲು ಜಾಕ್ಸ್ ಭಾರತಕ್ಕೆ ಮರಳಿದ್ದಾರೆ. ಆದರೆ, ಅಂತರ್‌ರಾಷ್ಟ್ರೀಯ ಕರ್ತವ್ಯದ ಹಿನ್ನೆಲೆಯಲ್ಲಿ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ. ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಇಂಗ್ಲೆಂಡ್‌ನ ಏಕದಿನ ಸರಣಿಯು ಮೇ 29ರಂದು ಆರಂಭಗೊಳ್ಳಲಿದೆ. ಐಪಿಎಲ್‌ನ ಪರಿಷ್ಕೃತ ವೇಳಾಪಟ್ಟಿಯ ಅನುಸಾರ, ಅದೇ ಸಮಯದಲ್ಲಿ ಪ್ಲೇಆಫ್ ಪಂದ್ಯಗಳೂ ನಡೆಯಲಿವೆ.
ಮುಂಬೈ ಇಂಡಿಯನ್ಸ್ ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮೇ 26ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತನ್ನ ಕೊನೆಯ ಎರಡು ಗುಂಪು ಹಂತದ ಪಂದ್ಯಗಳನ್ನು ಆಡಲಿದೆ. ಅಂಕಪಟ್ಟಿಯಲ್ಲಿ ಅದು ಈಗ ನಾಲ್ಕನೇ ಸ್ಥಾನದಲ್ಲಿದೆ.