×
Ad

ಸ್ನಾಯು ಗಾಯ: ಆಸ್ಟ್ರೇಲಿಯನ್ ಓಪನ್ ನಿಂದ ಹಿಂದೆ ಸರಿದ ರಫೇಲ್ ನಡಾಲ್

Update: 2024-01-07 23:23 IST

Photo : Instagram

ಮೆಲ್ಬರ್ನ್: ಸ್ಪೇನ್ ನ ಟೆನಿಸ್ ಸೂಪರ್ ಸ್ಟಾರ್ ರಫೇಲ್ ನಡಾಲ್ ರವಿವಾರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ. “ಸಣ್ಣ ಪ್ರಮಾಣದ ಸ್ನಾಯು ಹರಿತ''ಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಗಾಯದ ಹಿನ್ನೆಲೆಯಲ್ಲಿ ಒಂದು ವರ್ಷದ ವಿರಾಮದ ಬಳಿಕ ವೃತ್ತಿಪರ ಟೆನಿಸ್ ಗೆ ಮರಳಿದ ಒಂದೇ ವಾರದಲ್ಲಿ ಅವರು ಮತ್ತೆ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.

“ಎಲ್ಲರಿಗೂ ವಂದನೆಗಳು. ಬ್ರಿಸ್ಬೇನ್ ನಲ್ಲಿ ನಾನು ಇತ್ತೀಚೆಗೆ ಆಡಿದ ಪಂದ್ಯದ ವೇಳೆ ನನ್ನ ಸ್ನಾಯುವಿನಲ್ಲಿ ಸಣ್ಣದೊಂದು ಸಮಸ್ಯೆ ಕಂಡುಬಂದಿತ್ತು. ಅದು ನನ್ನ ಚಿಂತೆಗೆ ಕಾರಣವಾಗಿತ್ತು. ನಾನು ಮೆಲ್ಬರ್ನ್ ಗೆ ಬಂದಾಗ ಎಂ ಆರ್ ಐ ತಪಾಸಣೆಗೆ ಒಳಗಾಗಬೇಕಾಯಿತು. ನನ್ನ ಸ್ನಾಯುವಿನಲ್ಲಿ ಅತ್ಯಂತ ಸಣ್ಣ ಬಿರುಕೊಂದು ಕಾಣಿಸಿಕೊಂಡಿರುವುದು ತಪಾಸಣೆಯಲ್ಲಿ ಪತ್ತೆಯಾಯಿತು. ಆದರೆ ಈ ಬಿರುಕು ಮೂಡಿರುವುದು ನಾನು ಹಿಂದೆ ಗಾಯಕ್ಕೆ ಒಳಗಾಗಿದ್ದ ಸ್ಥಳದಲ್ಲಿ ಅಲ್ಲ ಎನ್ನುವುದು ಸಮಾಧಾನದ ವಿಚಾರ. ಸದ್ಯಕ್ಕೆ ಐದು ಸೆಟ್ ಗಳ ಪಂದ್ಯಗಳಲ್ಲಿ ಗರಿಷ್ಠ ಮಟ್ಟದ ಶ್ರಮವನ್ನು ಒಡ್ಡಿ ಸ್ಪರ್ಧಿಸಲು ನಾನು ಸದ್ಯಕ್ಕೆ ಸಿದ್ಧವಾಗಿಲ್ಲ. ನನ್ನ ವೈದ್ಯರನ್ನು ಭೇಟಿಯಾಗಲು ನಾನು ಸ್ಪೇನ್ ಗೆ ಹಿಂದಿರುಗುತ್ತಿದ್ದೇನೆ. ಅಲ್ಲೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದುಕೊಳ್ಳುತ್ತೇನೆ'' ಎಂದು ನಡಾಲ್ 'ಎಕ್ಸ್'ನಲ್ಲಿ ಬರೆದಿದ್ದಾರೆ.

ಸುದೀರ್ಘ ವಿಶ್ರಾಂತಿಯ ಬಳಿಕ, ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪಂದ್ಯಾವಳಿಯಲ್ಲಿ ಆಡುವ ಮೂಲಕ ಅವರು ಸ್ಪರ್ಧಾತ್ಮಕ ಟೆನಿಸ್ ಗೆ ಮರಳಿದ್ದರು. ಆದರೆ, ಶುಕ್ರವಾರ ನಡೆದ ಪಂದ್ಯಾವಳಿಯ ಕ್ವಾರ್ಟರ್ಫೈನಲ್ ನಲ್ಲಿ ಅವರು ಆಸ್ಟ್ರೇಲಿಯದ ಜೋರ್ಡಾನ್ ತಾಮ್ಸನ್ ವಿರುದ್ಧ ಪರಾಭವಗೊಂಡಿದ್ದರು. ಆ ಸುದೀರ್ಘ ಪಂದ್ಯವು 3 ಗಂಟೆ 25 ನಿಮಿಷಗಳವರೆಗೆ ಸಾಗಿತು.

ತಾಮ್ಸನ್ ಎರಡನೇ ಸೆಟ್‌ ನಲ್ಲಿ ಮೂರು ಮ್ಯಾಚ್ ಪಾಯಿಂಟ್ ಗಳನ್ನು ಗಳಿಸಿದರು. ಬಳಿಕ ನಡಾಲ್ ಆಯಾಸಗೊಂಡರು ಹಾಗೂ ಆಟದಲ್ಲಿನ ಅವರ ತೀವ್ರತೆ ಕಡಿಮೆಯಾಯಿತು. ಅಂತಿಮವಾಗಿ ತಾಮ್ಸನ್, ನಡಾಲ್ರನ್ನು 5-7, 7-6(8/6), 6-3 ಸೆಟ್‌ ಗಳಿಂದ ಸೋಲಿಸಿದರು. ಆ ಪಂದ್ಯವು ಮಧ್ಯರಾತ್ರಿಯವರೆಗೂ ಸಾಗಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News