ನೇಶನ್ಸ್ ಕಪ್: ಭಾರತ ಫುಟ್ಬಾಲ್ ತಂಡ ಪ್ರಕಟ; ಹಿರಿಯ ಆಟಗಾರ ಸುನೀಲ್ ಚೆಟ್ರಿಗೆ ಸ್ಥಾನವಿಲ್ಲ!
Photo | deccanherald
ಹೊಸದಿಲ್ಲಿ, ಆ.25: ತಝಕಿಸ್ತಾನ್ ನಲ್ಲಿ ಆಗಸ್ಟ್ 29ರಿಂದ ಆರಂಭವಾಗಲಿರುವ ಸಿಎಎಫ್‌ಎ ನೇಶನ್ಸ್ ಕಪ್ ಟೂರ್ನಿಗಾಗಿ ಭಾರತದ ನೂತನ ಪ್ರಧಾನ ಕೋಚ್ ಖಾಲಿದ್ ಜಮೀಲ್ ಅವರು ಸೋಮವಾರ 23 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದಾರೆ.
ಈ ಪಂದ್ಯಾವಳಿಯಲ್ಲಿ ಜಮೀಲ್ ಅವರು ಭಾರತದ ಕೋಚ್ ಆಗಿ ಮೊದಲ ಬಾರಿ ಕಾರ್ಯನಿರ್ವಹಿಸಲಿದ್ದಾರೆ.
ಹಿರಿಯ ಆಟಗಾರ ಸುನೀಲ್ ಚೆಟ್ರಿ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಹಿರಿಯ ಸ್ಟ್ರೈಕರ್ ಆಗಸ್ಟ್ 1ರಿಂದ ಆರಂಭವಾಗಿರುವ ತರಬೇತಿ ಶಿಬಿರದಲ್ಲೂ ಸೇರ್ಪಡೆಯಾಗಿರಲಿಲ್ಲ.
ಜಮೀಲ್ ಅವರು 29 ಸಂಭಾವ್ಯ ಆಟಗಾರರ ಗುಂಪಿನಿಂದ ತನ್ನ ತಂಡವನ್ನು ಅಂತಿಮಗೊಳಿಸಿದರು.
ಸ್ಪರ್ಧಾವಳಿಯು ಫಿಫಾ ಇಂಟರ್ ನ್ಯಾಶನಲ್ ವಿಂಡೋಗೆ ಒಳಪಡದ ಕಾರಣ ಮೋಹನ್ ಬಗಾನ್ ಎಫ್‌ಸಿ ತನ್ನ 7 ಆಟಗಾರರನ್ನು ಬಿಡುಗಡೆ ಮಾಡಿಲ್ಲ. ಲಿಸ್ಟನ್ ಕೊಲಾಕೊ, ಮನ್ ವಿರ್ ಸಿಂಗ್ ಹಾಗೂ ಸುಭಾಶಿಶ್ ಬೋಸ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
ಶುಕ್ರವಾರ ಶಿಬಿರ ಸೇರಿದ್ದ ಈಸ್ಟ್ ಬಂಗಾಳದ ಅನ್ವರ್ ಅಲಿ, ಎನ್.ಮಹೇಶ್ ಸಿಂಗ್ ಹಾಗೂ ಜೀಕ್ಸನ್ ಸಿಂಗ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಂಡಕ್ಕೆ ವಾಪಸಾಗಿದ್ದಾರೆ.
ಭಾರತ ತಂಡವು ಆತಿಥೇಯ ತಝಕಿಸ್ತಾನ, ಹಾಲಿ ಚಾಂಪಿಯನ್ ಇರಾನ್ ಹಾಗೂ ಅಫ್ಘಾನಿಸ್ತಾನ ತಂಡಗಳೊಂದಿಗೆ ‘ಬಿ’ಗುಂಪಿನಲ್ಲಿ ಸ್ಥಾನ ಪಡೆದಿದೆ.
ಆಗಸ್ಟ್ 29ರಂದು ತಕಿಸ್ತಾನ ತಂಡವನ್ನು ಎದುರಿಸುವ ಮೂಲಕ ಭಾರತ ತಂಡವು ತನ್ನ ಅಭಿಯಾನ ಆರಂಭಿಸಲಿದೆ. ಆ ನಂತರ ಸೆಪ್ಟಂಬರ್ 1ರಂದು ಇರಾನ್ ಹಾಗೂ ಸೆ.4ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೆಪ್ಟಂಬರ್ 8ರಂದು ನಡೆಯಲಿರುವ ಪ್ಲೇ ಆಫ್ ಗೆ ತೇರ್ಗಡೆಯಾಗುತ್ತವೆ. ಗ್ರೂಪ್ ವಿನ್ನರ್ ಗಳು ತಾಷ್ಕೆಂಟ್ ನಲ್ಲಿ ನಡೆಯಲಿರುವ ಫೈನಲ್ ನಲ್ಲಿ ಮುಖಾಮುಖಿಯಾಗಲಿವೆ. 2ನೇ ಸ್ಥಾನ ಪಡೆಯಲಿರುವ ತಂಡ 3ನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿದೆ.
ಜಮೀಲ್ ಅವರು ಈ ಹಿಂದೆ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ಪರ ಆಡುವಾಗ ಪ್ರಭಾವಿ ಪ್ರದರ್ಶನ ನೀಡಿದ್ದರು. ಭಾರತವು ಎಎಫ್‌ಸಿ ಏಶ್ಯಕಪ್ ಕ್ವಾಲಿಫೈಯಿಂಗ್ ಗ್ರೂಪ್‌ನಲ್ಲಿ 2 ಪಂದ್ಯಗಳಲ್ಲಿ ಕೇವಲ 1 ಅಂಕ ಗಳಿಸಿ ಕೆಳ ಸ್ಥಾನದಲ್ಲಿದ್ದು, ಕಠಿಣ ಪರೀಕ್ಷೆ ಎದುರಿಸುತ್ತಿದೆ.
*ಭಾರತದ ಫುಟ್ಬಾಲ್ ತಂಡ
ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್ ಸಂಧು, ಅಮರಿಂದರ್ ಸಿಂಗ್, ಹೃತಿಕ್ ತಿವಾರ್.
ಡಿಫೆಂಡರ್‌ಗಳು: ರಾಹುಲ್ ಭೇಕೆ, ನೌರೆಮ್ ರೋಶನ್ ಸಿಂಗ್, ಅನ್ವರ್ ಅಲಿ, ಸಂದೇಶ್ ಜಿಂಗನ್, ಚಿಂಗ್ಲೆನ್‌ಸನ ಸಿಂಗ್, ಮಿಂಗ್‌ಥಾನ್‌ಮವಿಯಾ ರಾಲ್ಟೆ, ಮುಹಮ್ಮದ್ ಉವೈ.
ಮಿಡ್ ಫೀಲ್ಡರ್‌ಗಳು: ನಿಖಿಲ್ ಪ್ರಭು, ಸುರೇಶ್ ಸಿಂಗ್, ದಾನಿಶ್ ಫಾರೂಕ್ ಭಟ್, ಜೀಕ್ಸನ್ ಸಿಂಗ್, ಬೋರಿಸ್ ಸಿಂಗ್, ಆಶಿಕ್ ಕುರುನಿಯನ್, ಉದಾಂತ ಸಿಂಗ್, ಮಹೇಶ್ ಸಿಂಗ್.
ಫಾರ್ವರ್ಡ್‌ಗಳು: ಇರ್ಫಾನ್ ಯಾದ್ವಾಡ್, ಮನ್ವೀರ್ ಸಿಂಗ್(ಜೂನಿಯರ್), ಜಿತಿನ್ ಎಂ.ಎಸ್., ಲಲ್ಲಿಯನ್ಜುವಾಲಾ ಚಾಂಗ್ಟೆ, ವಿಕ್ರಮ್ ಪ್ರತಾಪ್ ಸಿಂಗ್.