×
Ad

ದಕ್ಷಿಣ ಆಫ್ರಿಕಾ ಗೆ 246 ರನ್ ಗುರಿ ನೀಡಿದ ನೆದರ್ಲ್ಯಾಂಡ್ಸ್

Update: 2023-10-17 19:57 IST

Photo : cricketworldcup.com

ಧರ್ಮಶಾಲ:ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ದಕ್ಷಿಣ ಆಫ್ರಿಕಾ ಗೆಲುವಿಗೆ 246 ರನ್ ಗುರಿ ನೀಡಿದೆ.

ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮಳೆಯಿಂದಾಗಿ ಪಂದ್ಯದ ಆರಂಭ ತಡವಾಯಿತು. ಇದಕ್ಕೂ ಮೊದಲು, ಮೈದಾನದಲ್ಲಿ ತೇವವಾದ ಔಟ್‌ಫೀಲ್ಡ್‌ನಿಂದ ಟಾಸ್ ಕೂಡ ವಿಳಂಬವಾಯಿತು. ನಂತರ ನಿಯಮದ ಪ್ರಕಾರ ಪಂದ್ಯವನ್ನು ಪ್ರತಿ ತಂಡಕ್ಕೆ 43 ಓವರ್‌ಗಳಿಗೆ ಇಳಿಸಲಾಯಿತು.

ಬ್ಯಾಟಿಂಗ್ ಗೆ ಬಂದ ನೆದರ್ಲ್ಯಾಂಡ್ಸ್ನ ಆರಂಭಿಕ ಬ್ಯಾಟರ್ ವಿಕ್ರಮಜಿತ್ ಸಿಂಗ್ ಕೇವಲ 2 ರನ್ ಗೆ ಕಾಗಿಸೋ ರಬಡಾ ಗೆ ವಿಕೆಟ್ ಒಪ್ಪಿಸಿದರೆ ಮಾಕ್ಸ್ ಓ'ಡೌಡ್ 18 ರನ್ ಗಳಿಸಿ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಕೀಪರ್ ಕ್ವಿಂಟೆನ್ ಡಿ ಕಾಕ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕಾಲಿನ್ ಆಕೆರ್ಮಾನ್ ರಕ್ಷಣಾತ್ಮಕ ಆಟ ಆಡುವ ಪ್ರಯತ್ನ ಮಾಡಿದರು. ಆದರೆ ಜೆರಾಲ್ಡ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಾಸ್ ಡೇ ಲೀಡೆ 2 ರನ್ ಗೆ ರಬಡಾ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು.

ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಆಫ್ರಿಕನ್ ಬೌಲರ್ಸ್ 16 ಓವರ್ ಗಳಲ್ಲಿಯೇ ನೆದರ್ಲ್ಯಾಂಡ್ಸ್ ಪ್ರಮುಖ ನಾಲ್ವರು ಬ್ಯಾಟರ್ ಗಳನ್ನು ಪೆವಿಲಿಯನ್ ಸೇರಿಸಿ ಒತ್ತಡ ಹೇರಿದರು. ಬಳಿಕ ನಿಧಾನ ಗತಿಯಲ್ಲಿ ಸೈಬ್ರಾಂಡ್ 19 ರನ್ ಗಳಿಸಿ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರಾದರೂ ಅನುಭವಿ ಬೌಲಿಂಗ್ ಪಡೆಯ ಮುಂದೆ ಅವರ ಆಟ ಹೆಚ್ಚು ಸಮಯ ನಡೆಯಲಿಲ್ಲ. ನಿರಂತರ ಒಂದಾದ ಮೇಲೆ ಒಂದರಂತೆ ವಿಕೆಟ್ ಗಳ ಪತನ ನೆದರ್ಲ್ಯಾಂಡ್ಸ್ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು.

ತೇಜಾ ನಿದಾಮರು, ವಾನ್ ಬೀಕ್ ಕ್ರಮವಾಗಿ 20, 10 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ನೆದರ್ಲ್ಯಾಂಡ್ಸ್ ಪರ ಏಕಾಂಗಿ ಜವಾಬ್ದಾರಿಯುತ ನಾಯಕನ ಆಟ ಆಡಿದ ಸ್ಕಾಟ್ ಎಡ್ವರ್ಡ್ಸ್ 10 ಬೌಂಡರಿ 1 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ತಂಡ 200 ರ ಗಡಿ ದಾಟುವಂತೆ ಮಾಡಿ ದಕ್ಷಿಣ ಆಫ್ರಿಕಾ ಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ವಾನ್ ಡರ್ ಮಾರ್ವೆ ಉಪಯುಕ್ತ 29 ರನ್ ಗಳಿದರೆ ಹತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆರ್ಯನ್ ದತ್ ಸ್ಫೋಟಕ 23 ರನ್ ಬಾರಿಸಿದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸನ್, ಕಗಿಸೋ ರಬಡಾ ಹಾಗೂ ಲುಂಗಿ ಗಿಡಿ ತಲಾ 2 ವಿಕೆಟ್ ಪಡೆದರೆ ಜೆರಾಲ್ಡ್ ಮತ್ತು ಕೇಶವ್ ಮಹಾರಾಜ್ ಒಂದು ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News