×
Ad

ಝಿಂಬಾಬ್ವೆ ವಿರುದ್ಧ ಇನಿಂಗ್ಸ್, 359 ರನ್ ಅಂತರದಿಂದ ಗೆದ್ದ ನ್ಯೂಝಿಲ್ಯಾಂಡ್

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 3ನೇ ಭರ್ಜರಿ ಜಯ

Update: 2025-08-09 20:05 IST

PC : Zimbabwe Cricket

ಬುಲಾವಯೊ, ಆ.9: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೂರು ದಿನದೊಳಗೆ ಆತಿಥೇಯ ಝಿಂಬಾಬ್ವೆ ತಂಡವನ್ನು ಇನಿಂಗ್ಸ್ ಹಾಗೂ 359 ರನ್‌ ಗಳ ಅಂತರದಿಂದ ಮಣಿಸಿದ ನ್ಯೂಝಿಲ್ಯಾಂಡ್ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಬೃಹತ್ ಅಂತರದ ಜಯ ದಾಖಲಿಸಿದೆ.

ಈ ಮೂಲಕ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಝಿಂಬಾಬ್ವೆ ತಂಡವು ಮೊದಲ ಇನಿಂಗ್ಸ್‌ ನಲ್ಲಿ ಕೇವಲ 125 ರನ್ ಗಳಿಸಿ ಆಲೌಟಾಯಿತು. ಇದಕ್ಕೆ ಉತ್ತರವಾಗಿ ನ್ಯೂಝಿಲ್ಯಾಂಡ್ ಶನಿವಾರ ತನ್ನ ಮೊದಲ ಇನಿಂಗ್ಸ್‌ ನಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 601 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿ 476 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು.

ಡೆವೊನ್ ಕಾನ್ವೆ(153 ರನ್), ಹೆನ್ರಿ ನಿಕೊಲ್ಸ್(ಔಟಾಗದೆ 150) ಹಾಗೂ ರಚಿನ್ ರವೀಂದ್ರ(ಔಟಾಗದೆ 165)ಕಿವೀಸ್‌ ನ ಭರ್ಜರಿ ಮೊತ್ತಕ್ಕೆ ಮಹತ್ವದ ಕೊಡುಗೆ ನೀಡಿದರು.

ತನ್ನ 2ನೇ ಇನಿಂಗ್ಸ್‌ ನಲ್ಲೂ ಕಳಪೆ ಪ್ರದರ್ಶನ ನೀಡಿದ ಝಿಂಬಾಬ್ವೆ ತಂಡವು 28.1 ಓವರ್‌ ಗಳಲ್ಲಿ ಕೇವಲ 117 ರನ್‌ಗೆ ಆಲೌಟಾಯಿತು. ಕಿವೀಸ್ ವಿರುದ್ಧ್ದ ತನ್ನ 4ನೇ ಕನಿಷ್ಠ ಸ್ಕೋರ್ ಗಳಿಸಿ ಟೆಸ್ಟ್ ಕ್ರಿಕೆಟ್‌ ನಲ್ಲಿ ಹೀನಾಯವಾಗಿ ಸೋಲನುಭವಿಸಿದೆ.

ತ್ರಿಕೋನ ಟಿ-20 ಸರಣಿಯಲ್ಲಿ ಫೈನಲ್ ಸಹಿತ ಎಲ್ಲ ಪಂದ್ಯಗಳು ಹಾಗೂ ಇದೀಗ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ನ್ಯೂಝಿಲ್ಯಾಂಡ್ ತಂಡವು ತನ್ನ ಝಿಂಬಾಬ್ವೆ ಪ್ರವಾಸವನ್ನು ‘ಅಜೇಯ ದಾಖಲೆ’ಯೊಂದಿಗೆ ಕೊನೆಗೊಳಿಸಿದೆ.

2025ರಲ್ಲಿ 8 ಟೆಸ್ಟ್ ಪಂದ್ಯಗಳನ್ನು ಆಡಿರುವ ಝಿಂಬಾಬ್ವೆ ತಂಡವು ಬಾಂಗ್ಲಾದೇಶ ವಿರುದ್ಧ ಮಾತ್ರ ಏಕೈಕ ಪಂದ್ಯ ಜಯಿಸಿದೆ. ಆದರೆ ಸ್ವದೇಶದಲ್ಲಿ ತನ್ನ ಉಳಿದಿರುವ ಎಲ್ಲ ಪಂದ್ಯಗಳನ್ನು ಸೋತಿದೆ. ಝಿಂಬಾಬ್ವೆ ತಂಡ ಸೆಪ್ಟಂಬರ್‌ ನಲ್ಲಿ ತನ್ನ ಆತಿಥ್ಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ನಲ್ಲಿ ಅರ್ಹತೆ ಪಡೆಯುವತ್ತ ತನ್ನ ಗಮನ ಹರಿಸಲಿದೆ.

ನ್ಯೂಝಿಲ್ಯಾಂಡ್ ತಂಡವು ಈ ವರ್ಷದ ನವೆಂಬರ್-ಡಿಸೆಂಬರ್ ತನಕ ಯಾವುದೇ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ.

ನ್ಯೂಝಿಲ್ಯಾಂಡ್ ತಂಡವು ಇದೀಗ ಕೊನೆಯ 6 ಟೆಸ್ಟ್ ಪಂದ್ಯಗಳಲ್ಲಿ ಸೋಲುಂಡಿದ್ದು, ಪ್ರಸಕ್ತ ಸರಣಿಯಲ್ಲಿ ಎಲ್ಲ 4 ಇನಿಂಗ್ಸ್‌ ಗಳಲ್ಲಿ 170ಕ್ಕಿಂತ ಕಡಿಮೆ ಸ್ಕೋರ್ ಗಳಿಸಿದೆ.

ನ್ಯೂಝಿಲ್ಯಾಂಡ್ ತಂಡವು 2012ರಲ್ಲಿ ನೇಪಿಯರ್‌ ನಲ್ಲಿ ಇದೇ ತಂಡದ ವಿರುದ್ಧ ದಾಖಲಿಸಿದ್ದ ಇನಿಂಗ್ಸ್ ಹಾಗೂ 301 ರನ್ ಅಂತರದ ಗೆಲುವಿನ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.

ಚೊಚ್ಚಲ ಪಂದ್ಯವನ್ನಾಡಿದ ನ್ಯೂಝಿಲ್ಯಾಂಡ್‌ ನ ವೇಗದ ಬೌಲರ್ ಝಚಾರಿ ಫಾವುಲ್ಕೆಸ್ 2ನೇ ಇನಿಂಗ್ಸ್‌ ನಲ್ಲಿ ಐದು ವಿಕೆಟ್ ಗೊಂಚಲು ಸಹಿತ 59 ರನ್‌ಗೆ 7 ವಿಕೆಟ್‌ ಗಳನ್ನು ಕಬಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ ನಲ್ಲಿ ದೊಡ್ಡ ಅಂತರದ ಗೆಲುವಿನ ದಾಖಲೆಯು ಇಂಗ್ಲೆಂಡ್ ತಂಡದ ಹೆಸರಲ್ಲಿದೆ. ಆಂಗ್ಲರು 1938ರಲ್ಲಿ ದ ಓವಲ್‌ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಇನಿಂಗ್ಸ್ ಹಾಗೂ 579 ರನ್‌ಗಳ ಅಂತರದಿಂದ ಜಯ ಸಾಧಿಸಿದ್ದರು.

ಪ್ರಸಕ್ತ ಸರಣಿಯಲ್ಲಿ ಒಟ್ಟು 16 ವಿಕೆಟ್‌ ಗಳನ್ನು ಪಡೆದಿರುವ ಮ್ಯಾಟ್ ಹೆನ್ರಿ ‘ಸರಣಿಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ನ್ಯೂಝಿಲ್ಯಾಂಡ್ ಪರ 245 ಎಸೆತಗಳಲ್ಲಿ 153 ರನ್ ಗಳಿಸಿದ್ದಲ್ಲದೆ, ವಿಲ್ ಯಂಗ್(74 ರನ್, 101 ಎಸೆತ)ಅವರೊಂದಿಗೆ ಮೊದಲ ವಿಕೆಟ್‌ ಗೆ 162 ರನ್ ಜೊತೆಯಾಟ ನಡೆಸಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೇ ‘ಪಂದ್ಯಶ್ರೇಷ್ಠ’ಪ್ರಶಸ್ತಿ ಪಡೆದರು.

*ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಅಂತರದ ಜಯ

ಇನಿಂಗ್ಸ್ ಹಾಗೂ 579 ರನ್, ಇಂಗ್ಲೆಂಡ್-ಆಸ್ಟ್ರೇಲಿಯ, ದ ಓವಲ್, 1938

ಇನಿಂಗ್ಸ್ ಹಾಗೂ 360 ರನ್, ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ, ಜೋಹಾನ್ಸ್‌ಬರ್ಗ್, 2002

ಇನಿಂಗ್ಸ್ ಹಾಗೂ 359 ರನ್, ನ್ಯೂಝಿಲ್ಯಾಂಡ್-ಝಿಂಬಾಬ್ವೆ, ಬುಲಾವಯೊ, 2025

ಇನಿಂಗ್ಸ್ ಹಾಗೂ 336 ರನ್, ವೆಸ್ಟ್‌ಇಂಡೀಸ್-ಇಂಗ್ಲೆಂಡ್, ಕೋಲ್ಕತಾ, 1958-59

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News