ನ್ಯೂಝಿಲ್ಯಾಂಡ್ ODI ಸರಣಿ | ಜಸ್‌ಪ್ರಿತ್ ಬುಮ್ರಾ, ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆಯುವ ಸಾಧ್ಯತೆ
ಹಾರ್ದಿಕ್ ಪಾಂಡ್ಯ ,ಜಸ್‌ಪ್ರಿತ್ ಬುಮ್ರಾ | Photo Credit ; PTI
ಮುಂಬೈ, ಡಿ.30: ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಮಾನಸಿಕವಾಗಿ ಸಜ್ಜಾಗಲು ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.
ಈ ಇಬ್ಬರು ಆಟಗಾರರು ಕಿವೀಸ್ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
‘‘ಬುಮ್ರಾ ಹಾಗೂ ಹಾರ್ದಿಕ್ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಟಿ-20 ಸರಣಿಗಾಗಿ ಜನವರಿ 3 ಅಥವಾ 4ರಂದು ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗುವುದು’’ ಎಂದು ಮೂಲಗಳು ತಿಳಿಸಿವೆ.
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ರನ್ನು ಏಕದಿನ ಸರಣಿಯ ತಂಡದಿಂದ ಹೊರಗಿಡುವ ಸಾಧ್ಯತೆಯಿದೆ. ಒಂದು ವೇಳೆ ಪಂತ್‌ರನ್ನು ಕೈಬಿಟ್ಟರೆ, ಇಶಾನ್ ಕಿಶನ್ ಎರಡು ವರ್ಷಗಳಿಗೂ ಅಧಿಕ ಸಮಯದ ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗಲಿದ್ದಾರೆ ಎಂದು ವರದಿಯಾಗಿದೆ.