×
Ad

ನ್ಯಾಯಸಮ್ಮತವಲ್ಲದ ಸ್ಕೋರಿಂಗ್: ತೀರ್ಪುಗಾರರ ವಿರುದ್ಧ ಪದಕ ವಂಚಿತ ಭಾರತದ ಬಾಕ್ಸರ್ ನಿಶಾಂತ್ ದೇವ್ ಆರೋಪ

Update: 2024-08-04 13:46 IST

Photo: PTI

ಪ್ಯಾರೀಸ್: ಇಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಬಾಕ್ಸಿಂಗ್ ಸ್ಪರ್ಧೆಯ 71 ಕೆ.ಜಿ. ವಿಭಾಗದಲ್ಲಿ ಶನಿವಾರ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲು ಅನುಭವಿಸಿರುವ ಬಗ್ಗೆ ಬಾಕ್ಸರ್ ನಿಶಾಂತ್ ದೇವ್ ತೀರ್ಪುಗಾರರ ನಿರ್ಣಯಗಳ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಈ ಹಂತದಲ್ಲಿ ಗೆದ್ದಲ್ಲಿ ನಿಶಾಂತ್‍ಗೆ ಪದಕ ಖಚಿತವಾಗಿತ್ತು. ಭಾರತದ ಪಾಲಿಗೆ ಶನಿವಾರ ಬೇಸರದ ದಿನವಾಗಿದ್ದು, ನಿಶಾಂತ್ ಸೋಲಿನ ಜತೆಗೆ ಶೂಟಿಂಗ್‍ನಲ್ಲಿ ಮನು ಭಾಕರ್ ಐತಿಹಾಸಿಕ ಮೂರನೇ ಪದಕ ಗೆಲ್ಲುವುದರಿಂದ ವಂಚಿತರಾದರು. ಬಿಲ್ಗಾರಿಕೆಯಲ್ಲಿ ದೀಪಿಕಾ ಕುಮಾರಿ ಕ್ವಾರ್ಟರ್ ಫೈನಲ್‍ನಲ್ಲಿ ನಿರ್ಗಮಿಸಿದರು. ಮೆಕ್ಸಿಕೋದ ಮಾರ್ಕೊ ವೆರ್ಡೆ ಅಲ್ವರೆಝ್ ವಿರುದ್ಧ ವಿಭಜಿತ ತೀರ್ಪಿನಲ್ಲಿ ನಿಶಾಂತ್ ಸೋಲು ಅನುಭವಿಸಿದ್ದರು.

ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಕಂಚಿನ ಪದಕ ಗೆದ್ದಿದ್ದ 23 ವರ್ಷ ವಯಸ್ಸಿನ ನಿಶಾಂತ್, 2021ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅಲ್ವರೆಝ್ ವಿರುದ್ಧ ಗೆಲುವು ಸಾಧಿಸಿದ್ದರು. ಮೊದಲ ಸುತ್ತನ್ನು ಸುಲಭವಾಗಿ ಗೆದ್ದ ನಿಶಾಂತ್, ಎರಡನೇ ಸುತ್ತಿನಲ್ಲೂ ಬೌಟ್‍ನಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದರು. ಮೆಕ್ಸಿಕೊ ಪಟುವಿಗೆ ದೈತ್ಯ ಹೊಡೆತಗಳ ಮೂಲಕ ಆಘಾತ ನೀಡಿದರೂ, ತೀರ್ಪುಗಾರರು ಅಲ್ವರೆಝ್ ಪರವಾಗಿ ಈ ಸುತ್ತಿನಲ್ಲಿ ತೀರ್ಪು ನೀಡಿ 3-2 ಮುನ್ನಡೆಗೆ ಕಾರಣರಾಗಿದ್ದರು.

ಅಂತಿಮ ಸುತ್ತಿನ ಆರಂಭದಲ್ಲಿ ಅಲ್ವರಝ್ ಕೆಲ ಉತ್ತಮ ಪಂಚ್‍ಗಳನ್ನು ನೀಡಿದರು. ಕೊನೆಯಲ್ಲಿ ಭಾರತೀಯ ಪಟು ಇದನ್ನು ತಪ್ಪಿಸಿಕೊಂಡಿದ್ದರು. ಆದರೆ ಮುಂದುವರಿದಂತೆಲ್ಲ ಬೌಟ್‍ನಲ್ಲಿ ನಿಯಂತ್ರಣ ಸಾಧಿಸಿದರು. ಕೆಲ ಪಂಚ್‍ಗಳನ್ನು ನೀಡಲು ಪ್ರಯತ್ನಿಸಿದ್ದರೂ ನಿಧಾನವಾಗಿದ್ದರು. ಇದರ ಪ್ರಯೋಜನ ಪಡೆದ ಅಲ್ವರೆಝ್ ಗೆಲುವು ಸಾಧಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ತೀರ್ಪುಗಾರರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಭಾರತಕ್ಕೆ ಒಂದು ಪದಕ ನಿರಾಕರಿಸಲಾಗಿದೆ ಎಂದು ಆಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News