×
Ad

ಸಿರಾಜ್ ಉಲ್ಲೇಖವಿಲ್ಲದೇ ಇಂಗ್ಲೆಂಡ್ ವಿರುದ್ಧ ಗೆದ್ದ ಭಾರತ ತಂಡವನ್ನು ಅಭಿನಂದಿಸಿ ವಿವಾದಕ್ಕೆ ಗುರಿಯಾದ ಜಯ್ ಶಾ!

Update: 2025-07-07 20:36 IST

ಜಯ್ ಶಾ (@JayShah) , ಮುಹಮ್ಮದ್ ಸಿರಾಜ್(PTI) 

ಮುಂಬೈ: ಎಜ್ಬಾಸ್ಟನ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡವನ್ನು ಅಭಿನಂದಿಸುವ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಜಯ್ ಶಾರ ಪೋಸ್ಟ್ ಇದೀಗ ವಿವಾದಕ್ಕೆ ಗುರಿಯಾಗಿದೆ.

ಎಜ್ಬಾಸ್ಟನ್ ನಲ್ಲಿ ನಡೆದ ದ್ವಿತೀಯ ಟೆಸ್ಟ್ ನಲ್ಲಿ ಗೆಲುವು ಸಾಧಿಸಿದ ಭಾರತ ತಂಡವನ್ನು ಜಯ್ ಶಾ ತಮ್ಮ ಪೋಸ್ಟ್ ನಲ್ಲಿ ಅಭಿನಂದಿಸಿದ್ದಾರಾದರೂ, ಆ ಪೋಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಪ್ರಥಮ ಇನಿಂಗ್ಸ್ ವೇಳೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಮುಹಮ್ಮದ್ ಸಿರಾಜ್ ಹೆಸರನ್ನು ಕೈಬಿಟ್ಟಿರುವುದು ತೀವ್ರ ಆಕ್ಷೇಪಕ್ಕೆ ಒಳಗಾಗಿದೆ. ಜಯ್ ಶಾ ತಮ್ಮ ಪೋಸ್ಟ್ ನಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್, ವೇಗಿ ಆಕಾಶ್ ದೀಪ್, ಆಲ್ ರೌಂಡರ್ ರವೀಂದ್ರ ಜಡೇಜಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಹಾಗೂ ಉಪ ನಾಯಕ ರಿಷಭ್ ಪಂತ್ ರ ಹೆಸರುಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ. ಆದರೆ, ಈ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಆರು ವಿಕೆಟ್ ಹಾಗೂ ಎರಡನೆ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ಸೇರಿದಂತೆ ಒಟ್ಟು ಏಳು ಮಹತ್ವದ ವಿಕೆಟ್ ಗಳನ್ನು ಕಿತ್ತ ವೇಗಿ ಮುಹಮ್ಮದ್ ಸಿರಾಜ್ ಹೆಸರನ್ನು ಉಲ್ಲೇಖಿಸದಿರುವ ಅವರ ನಡೆ ಸಾಮಾಜಿಕ ಮಾಧ್ಯಮ ಬಳಕೆದಾರರ ಆಕ್ರೋಶಕ್ಕೆ ತುತ್ತಾಗಿದೆ.

ಮುಹಮ್ಮದ್ ಸಿರಾಜ್ ಅವರು ಇಂಗ್ಲೆಂಡ್ ನ ಪ್ರಥಮ ಇನಿಂಗ್ಸ್ ವೇಳೆ ತೋರಿದ ಅಮೋಘ ಬೌಲಿಂಗ್ ಪ್ರದರ್ಶನದಿಂದ ಇಂಗ್ಲಿಷ್ ಬ್ಯಾಟರ್ ಗಳು ಪಂದ್ಯದುದ್ದಕ್ಕೂ ರಕ್ಷಣಾತ್ಮಕ ಆಟದ ಮೊರೆ ಹೋಗುವಂತಾಗಿತ್ತು. ಇದರಿಂದಾಗಿ, ಭಾರತ ತಂಡವು ಈ ಪಂದ್ಯದಲ್ಲಿ ಭರ್ಜರಿ 336 ರನ್ ಗಳ ಜಯಭೇರಿ ಸಾಧಿಸುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಆದರೆ, ಈ ಗೆಲುವಿಗಾಗಿ ಭಾರತ ತಂಡವನ್ನು ಅಭಿನಂದಿಸಿ ಜಯ್ ಶಾ ಮಾಡಿರುವ ಪೋಸ್ಟ್ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಅಸಮಾಧಾನಕ್ಕೆ ಗುರಿಯಾಗಿದ್ದು, “ಮುಹಮ್ಮದ್ ಸಿರಾಜ್ ಮುಸ್ಲಿಂ ಆಗಿರುವುದರಿಂದ, ಅವರ ಹೆಸರನ್ನು ಜಯ್ ಶಾರ ಪೋಸ್ಟ್ ನಿಂದ ಕೈಬಿಡಲಾಗಿದೆ” ಎಂದು ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿದ್ದಾರೆ.

ಈ ನಡುವೆ, ಕ್ರಿಕೆಟ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿ ಭಾರತ ತಂಡವು ಎಜ್ಬಾಸ್ಟನ್ ನಲ್ಲಿ ಪ್ರಪ್ರಥಮ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿತು. ಈ ಗೆಲುವಿನಿಂದಾಗಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯೀಗ 1-1 ಅಂತರದಲ್ಲಿ ಸಮಬಲವಾಗಿದ್ದು, ಜುಲೈ 10ರಿಂದ ಕ್ರಿಕೆಟ್ ಕಾಶಿ ಎಂದೇ ಪ್ರಖ್ಯಾತವಾಗಿರುವ ಲಾರ್ಡ್ಸ್ ಮೈದಾನದಲ್ಲಿ ಮೂರನೆಯ ಟೆಸ್ಟ್ ಪ್ರಾರಂಭಗೊಳ್ಳಲಿದೆ.

ಶುಭಮನ್ ಗಿಲ್ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾದಾಗಿನಿಂದ, ಇದು ಅವರ ನಾಯಕತ್ವದಲ್ಲಿ ಭಾರತ ತಂಡ ದಾಖಲಿಸಿರುವ ಪ್ರಥಮ ಗೆಲುವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News