ಫ್ರೆಂಚ್ ಓಪನ್‌ನಲ್ಲಿ 100ನೇ ಗೆಲುವು ದಾಖಲಿಸಿದ ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್ | PC : NDTV
ಪ್ಯಾರಿಸ್ : ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ತನ್ನ ವೃತ್ತಿಜೀವನದಲ್ಲಿ 100ನೇ ಗೆಲುವು ದಾಖಲಿಸಿದ 2ನೇ ಆಟಗಾರ ಎನಿಸಿಕೊಂಡಿರುವ ನೊವಾಕ್ ಜೊಕೊವಿಕ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ 4ನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಬ್ರಿಟನ್‌ನ ಕ್ಯಾಮರೂನ್ ನೊರ್ರಿ ಅವರನ್ನು 6-2, 6-3, 5-2 ಸೆಟ್‌ಗಳಿಂದ ಮಣಿಸುವ ಮೂಲಕ ಸತತ 16ನೇ ವರ್ಷ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟರು.
38ರ ಹರೆಯದ ಜೊಕೊವಿಕ್ ಈ ಮೈಲಿಗಲ್ಲು ತಲುಪುವ ಮೂಲಕ ಸ್ಪೇನ್ ಸೂಪರ್‌ಸ್ಟಾರ್ ರಫೆಲ್ ನಡಾಲ್‌ರನ್ನು ಸೇರಿಕೊಂಡರು. ಫ್ರೆಂಚ್ ಓಪನ್‌ನಲ್ಲಿ ನಡಾಲ್ ಒಟ್ಟು 112 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದಾರೆ.
ಮೂರು ಬಾರಿಯ ಫ್ರೆಂಚ್ ಓಪನ್ ಚಾಂಪಿಯನ್ ಜೊಕೊವಿಕ್ ಆರಂಭದಿಂದಲೇ ಪಂದ್ಯದಲ್ಲಿ ಪ್ರಾಬಲ್ಯ ಸಾಧಿಸಿದರು. 6 ಗೇಮ್‌ಗಳಲ್ಲಿ 5ರಲ್ಲಿ ಜಯ ಸಾಧಿಸಿರುವ ಜೊಕೊವಿಕ್ ಹಿಡಿತ ಸಾಧಿಸಿದರು.
2ನೇ ಸೆಟ್‌ನಲ್ಲಿ ಜೊಕೊವಿಕ್ ಕೆಲವು ಅನಗತ್ಯ ತಪ್ಪೆಸಗಿದಾಗ ಕ್ಯಾಮರೂನ್ ಹೆಚ್ಚು ಆಕ್ರಮಣಕಾರಿಯಾಗಿ ಆಡಿದರು.ಆದರೆ ತಕ್ಷಣವೇ ತನ್ನ ಲಯ ಕಂಡುಕೊಂಡಿರುವ ಸರ್ಬಿಯದ ಆಟಗಾರ ಪಂದ್ಯದಲ್ಲಿ ತನ್ನ ಹಿಡಿತ ಕಾಯ್ದುಕೊಂಡರು.
24 ಗ್ರ್ಯಾನ್‌ಸ್ಲಾಮ್ ಒಡೆಯ ಜೊಕೊವಿಕ್ ಎರಡು ಗಂಟೆ ಹಾಗೂ 14 ನಿಮಿಷಗಳಲ್ಲಿ ಗೆಲುವಿನ ನಗಾರಿ ಬಾರಿಸಿದರು. 1971ರ ನಂತರ ಫ್ರೆಂಚ್ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಜಯ ದಾಖಲಿಸಿದ 2ನೇ ಆಟಗಾರ ಎನಿಸಿಕೊಂಡರು. ಇಸ್ಟಾವಾನ್ ಗುಲಿಯಸ್ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.
ಜೊಕೊವಿಕ್ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ 2023ರ ಫೈನಲಿಸ್ಟ್, 3ನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಸವಾಲನ್ನು ಎದುರಿಸಲಿದ್ದಾರೆ. ಜೊಕೊವಿಕ್ ಅವರು ಝ್ವೆರೆವ್ ವಿರುದ್ಧ ಹೆಡ್-ಟು-ಹೆಡ್ ದಾಖಲೆಯಲ್ಲಿ 8-5ರಿಂದ ಮುನ್ನಡೆಯಲ್ಲಿದ್ದಾರೆ.