×
Ad

ಬಾಕ್ಸರ್‌ಗಳನ್ನು ಹೆಚ್ಚಿನ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಿಗೆ ಒಡ್ಡಬೇಕು: ಒಲಿಂಪಿಕ್ ಪದಕ ವಿಜೇತ ವಿಜೇಂದರ್ ಸಿಂಗ್

Update: 2025-02-26 21:42 IST

ವಿಜೇಂದರ್ ಸಿಂಗ್ |  PTI  

ಹೊಸದಿಲ್ಲಿ: 2028ರ ಲಾಸ್‌ಏಂಜಲಿಸ್ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಲು ಭಾರತೀಯ ಬಾಕ್ಸರ್‌ಗಳನ್ನು ಹೆಚ್ಚಿನ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಿಗೆ ಒಡ್ಡಬೇಕು ಎಂದು ಒಲಿಂಪಿಕ್ ಪದಕ ವಿಜೇತ ವಿಜೇಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಅದೇ ವೇಳೆ, ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ)ನ ಆಡಳಿತವನ್ನು ಬಿಗಿಗೊಳಿಸಲು ಫೆಡರೇಶನ್‌ಗೆ ಹೊಸದಾಗಿ ನ್ಯಾಯೋಚಿತ ಚುನಾವಣೆ ನಡೆಸಬೇಕು ಎಂಬುದಾಗಿಯೂ ಅವರು ಕರೆ ನೀಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಬಳಿಕ, ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತೀಯ ಬಾಕ್ಸರ್‌ಗಳ ಅನುಪಸ್ಥಿತಿ ಕಾಣುತ್ತಿದೆ ಹಾಗೂ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್‌ಶಿಪ್ಸನ್ನೂ ಹಲವು ಬಾರಿ ಮುಂದೂಡಲಾಗಿದೆ. ಈ ನಡುವೆ, ಭಾರತೀಯ ಬಾಕ್ಸಿಂಗ್ ಫೆಡರೇಶನ್‌ನ ಚುನಾವಣೆಯನ್ನೂ ವಿಳಂಬಿಸಲಾಗಿದೆ.

‘‘2028ರಲ್ಲಿ ಲಾಸ್‌ಏಂಜಲಿಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಪಡೆಯಬೇಕಾದರೆ ಭಾರತೀಯ ಬಾಕ್ಸರ್‌ಗಳು ಇಂದಿನಿಂದಲೇ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಭಾರತೀಯ ಕ್ರೀಡೆಯನ್ನು ಬೆಳೆಸಬೇಕಾಗಿದೆ’’ ಎಂಬುದಾಗಿ ವಿಜೇಂದರ್ ಸಿಂಗ್ ಬುಧವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದಿದ್ದಾರೆ.

‘‘ಆ ನಿಟ್ಟಿನಲ್ಲಿ, ಬಲಿಷ್ಠ ಫೆಡರೇಶನ್ ಒಂದನ್ನು ಕಟ್ಟುವುದಕ್ಕಾಗಿ ನಾವು ಸಾಧ್ಯವಾದಷ್ಟು ಬೇಗ ಹೊಸ ಮತ್ತು ನ್ಯಾಯೋಚಿತ ಚುನಾವಣೆಯನ್ನು ನಡೆಸಬೇಕಾಗಿದೆ. ನಮ್ಮ ಸರಕಾರವು ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೆ ನನ್ನ ಅನುಭವವನ್ನು ನೀಡಲು ಸಿದ್ಧನಾಗಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಭಾರತೀಯ ಬಾಕ್ಸಿಂಗ್ ಫೆಡರೇಶನ್‌ನ ಆಡಳಿತ ಮಂಡಳಿಯ ಅವಧಿ ಫೆಬ್ರವರಿ 3ರಂದು ಮುಕ್ತಾಯಗೊಂಡಿದೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಮಧ್ಯಪ್ರವೇಶಿಸಿ ಫೆಡರೇಶನ್‌ನ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಲು ಸಮಿತಿಯೊಂದನ್ನು ಇತ್ತೀಚೆಗೆ ನೇಮಿಸಿರುವುದನ್ನು ಸ್ಮರಿಸಬಹುದಾಗಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತವು ನಿರಾಶಾದಾಯಕ ಪ್ರದರ್ಶನವನ್ನು ನೀಡಿದ್ದು, ಬರಿಗೈಯಲ್ಲಿ ಹಿಂದಿರುಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News