×
Ad

ಮೈದಾನದಲ್ಲಿ ಅನುಚಿತ ವರ್ತನೆ: ಎರಡು ಪಂದ್ಯಗಳಿಂದ ಹರ್ಮನ್‌ಪ್ರೀತ್ ಅಮಾನತು

Update: 2023-07-25 19:57 IST

ಹೊಸದಿಲ್ಲಿ, ಜು.25: ಬಾಂಗ್ಲಾದೇಶ ವಿರುದ್ಧ ಢಾಕಾದಲ್ಲಿ ಶನಿವಾರ ನಡೆದ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ ಸರಣಿಯ ಮೂರನೇ ಪಂದ್ಯದಲ್ಲಿ ತನ್ನ ಬ್ಯಾಟ್‌ನಿಂದ ಸ್ಟಂಪ್‌ಗೆ ಬಾರಿಸಿದ್ದಲ್ಲದೆ, ಅಂಪೈರ್‌ರನ್ನು ನಿಂದಿಸಿ ಎರಡು ಪ್ರತ್ಯೇಕ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ರನ್ನು ಮುಂದಿನ 2 ಅಂತರ್‌ರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ಹರ್ಮನ್‌ಪ್ರೀತ್ ಅವರು ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ ನ ಎರಡು ಪಂದ್ಯಗಳಿಂದ ವಂಚಿತರಾಗಲಿದ್ದಾರೆ.

ಕೌರ್ 14 ರನ್ ಗಳಿಸಿದ್ದಾಗ ಅಂಪೈರ್ ಔಟ್ ತೀರ್ಪು ನೀಡಿದ್ದಕ್ಕೆ ಆಕ್ರೋಶಗೊಂಡಿದ್ದ ಕೌರ್ ಸ್ಟಂಪ್‌ಗೆ ಬ್ಯಾಟ್‌ನಿಂದ ಬಾರಿಸಿದ್ದಲ್ಲದೆ ಅಂಪೈರ್ ರನ್ನು ಸಾರ್ವಜನಿಕವಾಗಿ ಟೀಕಿಸಿದ್ದರು.

ಕೌರ್‌ಗೆ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ ಹಾಗೂ ಮೂರು ಡಿಮೆರಿಟ್ ಪಾಯಿಂಟ್ ಗಳನ್ನು ಅವರ ಶಿಸ್ತು ದಾಖಲೆಗೆ ಸೇರಿಸಲಾಗಿದೆ. ಕೌರ್ ಅವರು ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.8 ಅನ್ನು ಉಲ್ಲಂಘಿಸಿದ್ದಾರೆ. ಭಾರತದ ಇನಿಂಗ್ಸ್‌ನ 34ನೇ ಇನಿಂಗ್ಸ್‌ನಲ್ಲಿ ಆಫ್ ಸ್ಪಿನ್ನರ್ ನಹಿದಾ ಅಖ್ತರ್‌ಗೆ ಔಟಾದಾಗ ಕೌರ್ ಸ್ಟಂಪ್‌ಗೆ ತನ್ನ ಬ್ಯಾಟ್‌ನಿಂದ ಹೊಡೆದಿದ್ದರು. ಆ ನಂತರ ಪ್ರಶಸ್ತಿ ಸಮಾರಂಭದಲ್ಲಿ ಅಂಪೈರ್ ಕಾರ್ಯವೈಖರಿಯನ್ನು ಟೀಕಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News