×
Ad

ಪಾಕಿಸ್ತಾನ-ವಿಂಡೀಸ್ ಮಧ್ಯೆ ದ್ವಿತೀಯ ಟೆಸ್ಟ್: ಒಂದೇ ದಿನ 20 ವಿಕೆಟ್‌ಗಳು ಪತನ

Update: 2025-01-25 20:47 IST

PC : PTI 

ಮುಲ್ತಾನ್: ಪಾಕಿಸ್ತಾನ ಹಾಗೂ ವಿಂಡೀಸ್ ನಡುವೆ ಶನಿವಾರ ಆರಂಭವಾದ 2ನೇ ಟೆಸ್ಟ್ ಪಂದ್ಯದ ಮೊದಲ ದಿನವೇ 20 ವಿಕೆಟ್‌ಗಳು ಪತನಗೊಂಡಿವೆ. ಉಭಯ ತಂಡಗಳ ನಡುವಿನ ಹೋರಾಟದಲ್ಲಿ ವಿಂಡೀಸ್ 9 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಸರಣಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸ್ಪಿನ್ ಅಸ್ತ್ರದ ಮೂಲಕ ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡವನ್ನು ಹಿಮ್ಮೆಟ್ಟಿಸುವ ತಂತ್ರವನ್ನು ಮುಂದುವರಿಸಿದೆ.

ವಿಂಡೀಸ್ ತಂಡವು ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನುಮಾನ್ ಅಲಿ ಸ್ಪಿನ್ ಮೋಡಿಗೆ ತತ್ತರಿಸಿದ ವಿಂಡೀಸ್ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 163 ರನ್ ಗಳಿಸಿ ಆಲೌಟಾಗಿದೆ. ನುಮಾನ್ ಅಲಿ ಹ್ಯಾಟ್ರಿಕ್ ವಿಕೆಟ್ ಕಿತ್ತ ಪಾಕಿಸ್ತಾನದ ಮೊದಲ ಸ್ಪಿನ್ನರ್ ಎನಿಸಿಕೊಂಡರು.

ಪಾಕಿಸ್ತಾನ ತಂಡವು ಎಡಗೈ ಸ್ಪಿನ್ನರ್ ವಾರಿಕನ್(4-43) ನೇತೃತ್ವದ ಬೌಲಿಂಗ್ ದಾಳಿಗೆ ನಿರುತ್ತರವಾಗಿ 47 ಓವರ್‌ಗಳಲ್ಲಿ 154 ರನ್ ಗಳಿಸಿ ಆಲೌಟಾಯಿತು.

ವಾರಿಕನ್‌ಗೆ ಗುಡಕೇಶ್ ಮೋಟಿ(3-49)ಹಾಗೂ ಕೆಮರ್ ರೋಚ್(2-15)ಸಾಥ್ ನೀಡಿದರು.

ಪಾಕ್ ಪರ ವಿಕೆಟ್‌ಕೀಪರ್-ಬ್ಯಾಟರ್ ಮುಹಮ್ಮದ್ ರಿಝ್ವಾನ್(49 ರನ್, 75 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಸೌದ್ ಶಕೀಲ್(32 ರನ್, 62 ಎಸೆತ)ಒಂದಷ್ಟು ಹೋರಾಟ ನೀಡಿದರು. ರಿಝ್ವಾನ್ ಹಾಗೂ ಶಕೀಲ್ 65 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಪಾಕ್ ತಂಡವು ಕೊನೆಯ 6 ವಿಕೆಟ್‌ಗಳನ್ನು 35 ರನ್ ಸೇರಿಸುವಷ್ಟರಲ್ಲಿ ಕಳೆದುಕೊಂಡಿತು.

ಏಶ್ಯದಲ್ಲಿ ನಡೆದ ಪುರುಷರ ಟೆಸ್ಟ್ ಕ್ರಿಕೆಟ್‌ನ ಮೊದಲ ದಿನದಾಟದಲ್ಲಿ ಇದೇ ಮೊದಲ ಬಾರಿ ಗರಿಷ್ಠ ವಿಕೆಟ್‌ಗಳು ಪತನಗೊಂಡಿವೆ. 1987ರಲ್ಲಿ ಭಾರತ ಹಾಗೂ ವಿಂಡೀಸ್ ನಡುವಿನ ದಿಲ್ಲಿ ಟೆಸ್ಟ್ ಪಂದ್ಯದಲ್ಲಿ 18 ವಿಕೆಟ್‌ಗಳು ಪತನಗೊಂಡಿದ್ದವು.

2015ರ ನಂತರ ಟೆಸ್ಟ್ ಕ್ರಿಕೆಟ್‌ನ ಮೊದಲ ದಿನದಾಟದಲ್ಲಿ 2ನೇ ಬಾರಿ ಗರಿಷ್ಠ ವಿಕೆಟ್‌ಗಳು ಪತನಗೊಂಡಿವೆ. 2024ರಲ್ಲಿ ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಮಧ್ಯೆದ ಪಂದ್ಯದಲ್ಲಿ ಒಟ್ಟು 23 ವಿಕೆಟ್‌ಗಳು ಉದುರಿದ್ದವು.

ವಿಂಡೀಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 200 ರನ್‌ನೊಳಗೆ ಆಲೌಟಾದ ನಂತರ 4ನೇ ಬಾರಿ ಮುನ್ನಡೆ ಪಡೆದಿದೆ.

ಅಲಿ 41 ರನ್‌ಗೆ 6 ವಿಕೆಟ್‌ಗಳನ್ನು ಉರುಳಿಸಿ ಶ್ರೇಷ್ಠ ಪ್ರದರ್ಶನ ನೀಡಿದರು. ಅಲಿಗೆ ಇನ್ನೋರ್ವ ಸ್ಪಿನ್ನರ್ ಸಾಜಿದ್ ಖಾನ್(2-64)ಸಾಥ್ ನೀಡಿದರು.

ವಿಂಡೀಸ್ ಪರ ಗುಡಕೇಶ್ ಮೋಟಿ ತನ್ನ ಜೀವನಶ್ರೇಷ್ಠ ಇನಿಂಗ್ಸ್(55 ರನ್)ಮೂಲಕ ಏಕಾಂಗಿ ಹೋರಾಟ ನೀಡಿದರು.ಸ್ಪೆಷಲಿಸ್ಟ್ ಬ್ಯಾಟರ್ ಗುಡಕೇಶ್ ಅವರು ಜೊಮೆಲ್ ವಾರಿಕಲ್(ಔಟಾಗದೆ 36)ಅವರೊಂದಿಗೆ ಕೊನೆಯ ವಿಕೆಟ್‌ಗೆ ನಿರ್ಣಾಯಕ 68 ರನ್ ಜೊತೆಯಾಟ ನಡೆಸಿದರು.

ವಿಂಡೀಸ್ ನಾಯಕ ಕ್ರೆಗ್ ಬ್ರಾತ್‌ವೇಟ್‌ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ನುಮಾನ್ ಎದುರಾಳಿ ತಂಡದ ನಾಟಕೀಯ ಕುಸಿತಕ್ಕೆ ಚಾಲನೆ ನೀಡಿದರು. 2 ವಿಕೆಟ್‌ಗೆ 32 ರನ್ ಗಳಿಸಿದ ಪ್ರವಾಸಿ ತಂಡವು ಕೇವಲ 14 ಎಸೆತಗಳಲ್ಲಿ 38 ರನ್‌ಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತು.

ಗುಡಕೇಶ್ ಅವರು ಕೆಮಾರ್ ರೋಚ್(25 ರನ್)ಅವರೊಂದಿಗೆ 9ನೇ ವಿಕೆಟ್‌ಗೆ 41 ರನ್ ಜೊತೆಯಾಟ ನಡೆಸಿದರು. 38ರ ಹರೆಯದ ಎಡಗೈ ಸ್ಪಿನ್ನರ್ ಅಲಿ ಕೊನೆಯ 2 ವಿಕೆಟ್‌ಗಳನ್ನು ಉರುಳಿಸಿದರು. ಈ ಮೂಲಕ ಇನಿಂಗ್ಸ್‌ನಲ್ಲಿ 6 ವಿಕೆಟ್ ಗೊಂಚಲು ಪಡೆದರು.

ಮುಲ್ತಾನ್‌ನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಬೌಲರ್‌ಗಳನ್ನು ಬಳಸಿ 127 ರನ್ ಗೆಲುವು ಪಡೆದಿದ್ದ ಪಾಕಿಸ್ತಾನ ತಂಡವು ಇದೇ ತಂತ್ರವನ್ನು 2ನೇ ಟೆಸ್ಟ್ ಪಂದ್ಯದಲ್ಲೂ ಮುಂದುವರಿಸಿದೆ.

ಪಾಕಿಸ್ತಾನದ ಪರ ಈ ಹಿಂದೆ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳೆಂದರೆ: ವಸೀಂ ಅಕ್ರಂ(1999ರಲ್ಲಿ ಲಂಕಾ ವಿರುದ್ಧ 2 ಬಾರಿ ಹ್ಯಾಟ್ರಿಕ್), ಅಬ್ದುಲ್ ರಝಾಕ್(2000ರಲ್ಲಿ ಶ್ರೀಲಂಕಾ ವಿರುದ್ಧ), ಮುಹಮ್ಮದ್ ಸಾಮಿ(2002ರಲ್ಲಿ ಶ್ರೀಲಂಕಾದ ವಿರುದ್ಧ) ಹಾಗೂ ನಸೀಂ ಶಾ(2020ರಲ್ಲಿ ಬಾಂಗ್ಲಾದೇಶ ವಿರುದ್ಧ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News