×
Ad

ಪಾಕ್ ಕ್ರಿಕೆಟೇ ನಾಶವಾಗಬಹುದು: ಇಮ್ರಾನ್ ಆತಂಕ

Update: 2025-02-26 21:35 IST

 ಇಮ್ರಾನ್ ಖಾನ್ | PC : NDTV  

ಇಸ್ಲಾಮಾಬಾದ್: ಪ್ರಸಕ್ತ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ಪಾಕಿಸ್ತಾನದ ನಿರ್ವಹಣೆ ಬಗ್ಗೆ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಅವರ ಸಹೋದರಿ ಅಲೀಮಾ ಖಾನ್ ಹೇಳಿದ್ದಾರೆ.

ಆತಿಥೇಯ ಪಾಕಿಸ್ತಾನವು ನ್ಯೂಝಿಲ್ಯಾಂಡ್ ಮತ್ತು ಭಾರತದ ವಿರುದ್ಧದ ಪಂದ್ಯಗಳನ್ನು ಸೋತು 8 ತಂಡಗಳ ಪಂದ್ಯಾವಳಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ.

‘‘ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನವು ಸೋತಿರುವುದಕ್ಕೆ ಪಾಕಿಸ್ತಾನ್ ತೆಹ್ರೀಕೆ ಇನ್ಸಾಪ್ (ಪಿಟಿಐ) ಪಕ್ಷದ ಸ್ಥಾಪಕ ಇಮ್ರಾನ್ ಖಾನ್ ಬೇಸರಗೊಂಡಿದ್ದಾರೆ’’ ಎಂದು ಇಮ್ರಾನ್‌ರನ್ನು ಭೇಟಿಯಾದ ಬಳಿಕ ರಾವಲ್ಪಿಂಡಿಯಲ್ಲಿರುವ ಅಡಿಯಾಲ ಜೈಲಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಲೀಮಾ ಹೇಳಿದರು.

ಅದೇ ವೇಳೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಅಧ್ಯಕ್ಷ ಮುಹ್ಸಿನ್ ನಖ್ವಿಯ ಕ್ರಿಕೆಟ್ ಅರ್ಹತೆಗಳನ್ನೂ 1992ರ ವಿಶ್ವಕಪ್ ವಿಜೇತ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಪ್ರಶ್ನಿಸಿದರು ಎಂದು ಅಲೀಮಾ ತಿಳಿಸಿದರು.

‘‘ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ತಮಗೆ ಬೇಕಾದವರನ್ನು ಕೂರಿಸಿದರೆ ಕ್ರಿಕೆಟ್ ನಿಧಾನವಾಗಿ ಸಾಯುತ್ತದೆ ಎಂಬುದಾಗಿಯೂ ಇಮ್ರಾನ್ ಖಾನ್ ಅಭಿಪ್ರಾಯಪಟ್ಟರು’’ ಎಂದು ಅವರು ಹೇಳಿದರು. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವನ್ನು ಇಮ್ರಾನ್ ಖಾನ್ ವೀಕ್ಷಿಸಿದ್ದಾರೆ ಎಂದರು.

*ಪಾಕ್ ಕ್ರಿಕೆಟ್‌ನ ಅಧಃಪತನಕ್ಕೆ ಇಮ್ರಾನ್ ಖಾನ್ ಕಾರಣ; ಪಿಸಿಬಿ ಮಾಜಿ ಅಧ್ಯಕ್ಷ ನಜಮ್ ಸೇಠಿ ಪರೋಕ್ಷ ಆರೋಪ

ಪಾಕಿಸ್ತಾನಿ ಕ್ರಿಕೆಟ್‌ ನ ಅಧಃಪತನಕ್ಕೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಾರಣ ಎಂಬುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಮಾಜಿ ಅಧ್ಯಕ್ಷ ನಜಮ್ ಸೇಠಿ ಪರೋಕ್ಷವಾಗಿ ಆರೋಪಿಸಿದ್ದಾರೆ.

‘‘ಪಾಕಿಸ್ತಾನವು ಪಾತಾಳಕ್ಕೆ ಇಳಿದಿದೆ ಎಂಬುದಾಗಿ ಕ್ರಿಕೆಟ್ ಸಮುದಾಯ ಹೇಳುತ್ತಿದೆ. ಒಂದು ಕಾಲದಲ್ಲಿ ಟಿ20ಯಲ್ಲಿ (2018), ಟೆಸ್ಟ್‌ಗಳಲ್ಲಿ (2016) ಮತ್ತು ಏಕದಿನ ಪಂದ್ಯಗಳಲ್ಲಿ (1990 ಮತ್ತು 1996) ನಂಬರ್ ವನ್ ಆಗಿದ್ದ ಹಾಗೂ 1992ರಲ್ಲಿ ವಿಶ್ವಕಪ್ ಮತ್ತು 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಕ್ರಿಕೆಟ್ ತಂಡವೊಂದು ಈಗ ಜಿಂಬಾಬ್ವೆಯ ಮಟ್ಟಕ್ಕೆ ಇಳಿಯಲು ಕಾರಣವೇನು?’’ ಎಂದು ಅವರು ಪ್ರಶ್ನಿಸಿದರು.

ಪಾಕಿಸ್ತಾನ ಕ್ರಿಕೆಟ್‌ನ ಅಧಃಪತನ 2019ರಲ್ಲಿ ಆರಂಭವಾಯಿತು ಎಂದು ಸೇಠಿ ಹೇಳಿದರು. 2019ರಲ್ಲಿ, ನೂತನ ಪ್ರಧಾನಿ/ಪೋಷಕರ ಅಡಿಯಲ್ಲಿ ಪಿಸಿಬಿಯ ನೂತನ ಆಡಳಿತ ಮಂಡಳಿಯು, ದಶಕಗಳ ಕಾಲ ಪಾಕಿಸ್ತಾನಿ ಕ್ರಿಕೆಟ್‌ಗೆ ಉತ್ತಮ ಕೊಡುಗೆ ನೀಡಿದ್ದ ದೇಶಿ ಕ್ರಿಕೆಟ್‌ನ ಸ್ವರೂಪವನ್ನು ಬದಲಾಯಿಸಿತು ಮತ್ತು ಅದರ ಸ್ಥಾನಕ್ಕೆ ಆಸ್ಟ್ರೇಲಿಯದ ಹೈಬ್ರಿಡ್ ಮಾದರಿಯನ್ನು ತಂದಿತು ಎಂದು ಅವರು ಹೇಳಿದರು.

ಆ ಅವಧಿಯಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಅವರು ಎಹ್ಸಾನ್ ಮಾನಿಯನ್ನು ಪಿಸಿಬಿ ಅಧ್ಯಕ್ಷರಾಗಿ ನೇಮಿಸಿದರು.

‘‘ರಾಜಕೀಯ ಹಸ್ತಕ್ಷೇಪ ಮುಂದುವರಿಯಿತು. ವಿರುದ್ಧಾತ್ಮಕ ನೀತಿಗಳು ಪಿಸಿಬಿಯಲ್ಲಿ ಸಾಮಾನ್ಯವಾಗಿದ್ದವು. ವಿದೇಶಿ ಕೋಚ್‌ಗಳನ್ನು ನೇಮಿಸಲಾಯಿತು ಮತ್ತು ಹೊರದಬ್ಬಲಾಯಿತು. ಆಯ್ಕೆಗಾರರನ್ನು ಮನಬಂದಂತೆ ಆರಿಸಲಾಯಿತು. ಹಿಂದೆ ಹೊರದಬ್ಬಲ್ಪಟ್ಟವರನ್ನು ಆಡಳಿತ ಮತ್ತು ಕೋಚ್ ಹುದ್ದೆಗಳಿಗೆ ಮತ್ತೆ ನೇಮಿಸಲಾಯಿತು. ಅದರ ಭಯಾನಕ ಫಲಿತಾಂಶ ಈಗ ನಮ್ಮ ಮುಂದೆ ಇದೆ’’ ಎಂದು ಸೇಠಿ ಹೇಳಿದ್ದಾರೆ.

ಇಮ್ರಾನ್ ಖಾನ್ ಪ್ರಧಾನಿಯಾದ ತಕ್ಷಣ ಪಿಸಿಬಿ ಅಧ್ಯಕ್ಷತೆಗೆ ಸೇಠಿ ರಾಜೀನಾಮೆ ನೀಡಿದ್ದರು. ಬಳಿಕ, ಮಾಜಿ ಐಸಿಸಿ ಅಧ್ಯಕ್ಷ ಎಹ್ಸಾನ್ ಮಾನಿಯನ್ನು ಪಿಸಿಬಿ ಅಧ್ಯಕ್ಷರಾಗಿ ನೇಮಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News