‘‘ಪಾಕಿಸ್ತಾನ್ ಝಿಂದಾಭಾಗ್!’ ಸೆಹವಾಗ್ ಹಾಸ್ಯಚಟಾಕಿ
Photo- PTI
ಹೊಸದಿಲ್ಲಿ: ಹಾಲಿ ಐಸಿಸಿ ವಿಶ್ವಕಪ್‌ನಲ್ಲಿ, ಸೆಮಿಫೈನಲ್‌ಗೆ ತಲುಪುವ ಪಾಕಿಸ್ತಾನದ ಅವಕಾಶಗಳು ಕೇವಲ ಗಣಿತದ ಲೆಕ್ಕಚಾರಕ್ಕೆ ಸೀಮಿತವಾದ ಬಳಿಕ, ಮಾಜಿ ಭಾರತೀಯ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ‘‘ಪಾಕಿಸ್ತಾನ್ ಝಿಂದಾಭಾಗ್!’ ಎಂದು ಹೇಳುವ ಮೂಲಕ ಕಟಕಿಯಾಡಿದ್ದಾರೆ.
ಪಾಕಿಸ್ತಾನ ಸೆಮಿಫೈನಲ್ ತಲುಪಬೇಕಾದರೆ, ಶ್ರೀಲಂಕಾವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಬೇಕಾಗಿತ್ತು. ಆದರೆ, ಗುರುವಾರ ನ್ಯೂಝಿಲ್ಯಾಂಡ್ ತಂಡವು ಶ್ರೀಲಂಕಾವನ್ನು ಐದು ವಿಕೆಟ್‌ಗಳಿಂದ ಸೋಲಿಸಿದೆ.
ಇದರೊಂದಿಗೆ ಪಾಕಿಸ್ತಾನ ವಾಸ್ತವಿಕವಾಗಿ ಪಂದ್ಯಾವಳಿಯಿಂದ ಹೊರಬಿದ್ದಿದೆ. ಒಂದು ವೇಳೆ ಅದು ಸೆಮಿಫೈನಲ್ ತಲುಪಬೇಕಾದರೆ, ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಗಾಧ ಅಂತರದಿಂದ ಸೋಲಿಸಬೇಕಾಗಿದೆ. ಹೀಗೆ, ಪಾಕಿಸ್ತಾನದ ಸೆಮಿಫೈನಲ್ ಅವಕಾಶ ಬಹುತೇಕ ಕೈತಪ್ಪಿರುವುದರಿಂದ, ಆ ತಂಡದ ವಾಪಸ್ ಪ್ರಯಾಣ ಸುಖಕರವಾಗಿರಲಿ ಎಂದು ಸೆಹವಾಗ್ ಹಾರೈಸಿದ್ದಾರೆ.
ಅದೂ ಅಲ್ಲದೆ, ಪಾಕಿಸ್ತಾನವು ಯಾವೆಲ್ಲ ತಂಡಗಳಿಗೆ ಬೆಂಬಲ ನೀಡುತ್ತದೋ ಆ ತಂಡಗಳು ಪಾಕಿಸ್ತಾನದಂತೆಯೇ ಆಡಲು ತೊಡಗುತ್ತವೆ ಎಂಬುದಾಗಿಯೂ ಹಾಸ್ಯ ಮಾಡಿದ್ದಾರೆ.
ಹಾಸ್ಯ ಚಟಾಕಿ ಹಾರಿಸಿದ ವಸೀಮ್ ಅಕ್ರಮ್!
ಪಾಕಿಸ್ತಾನ ವಿಶ್ವಕಪ್‌ನಿಂದ ಹೊರಬೀಳುವುದು ಬಹುತೇಕ ಖಚಿತವಾದ ಬಳಿಕ ಆ ತಂಡದ ಮಾಜಿ ನಾಯಕ ವಸೀಮ್ ಅಕ್ರಮ್ ಕೂಡ ‘ಎ ಸ್ಪೋರ್ಟ್ಸ್’ ಚಾನೆಲ್‌ನಲ್ಲಿ ಹಾಸ್ಯ ಚಟಾಕಿಯೊಂದನ್ನು ಹಾರಿಸಿದ್ದಾರೆ.
‘‘ಇಂಗ್ಲೆಂಡ್ ವಿರುದ್ಧದ ಕೊನೆಯ ಪಂದ್ಯದಲ್ಲಿ, ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಬೇಕು, ಬಳಿಕ ಇಂಗ್ಲೆಂಡ್ ತಂಡವನ್ನು ಅವರ ಡ್ರೆಸಿಂಗ್ ಕೋಣೆಯಲ್ಲಿ ಕೂಡಿ ಹಾಕಿ ಹೊರಗಿನಿಂದ ಬೀಗ ಹಾಕಿ ಅವರೆಲ್ಲರೂ ಟೈಮ್ಡ್ ಔಟ್ ಆಗುವ ಹಾಗೆ ಮಾಡಬೇಕು. ಈ ಮೂಲಕ ಅದು 20 ನಿಮಿಷಗಳಲ್ಲಿ ಪಂದ್ಯವನ್ನು ಗೆಲ್ಲಬಹುದು ಎಂಬುದಾಗಿ ವಸೀಮ್ ಭಾಯಿ ಹೇಳಿದ್ದಾರೆ’’ ಎಂದು ಕಾರ್ಯಕ್ರಮದ ನಿರೂಪಕರು ಹೇಳಿದಾಗ ಇತರ ಅತಿಥಿಗಳೆಲ್ಲರೂ ಗೊಳ್ಳನೆ ನಕ್ಕರು!