ಭಾರತೀಯ ಜೆರ್ಸಿ ಧರಿಸಿ, ತ್ರಿವರ್ಣ ಧ್ವಜ ಬೀಸಿದ್ದ ಪಾಕಿಸ್ತಾನದ ಕಬಡ್ಡಿ ಆಟಗಾರನಿಗೆ ನಿಷೇಧ
ಉಬೈದುಲ್ಲಾ ರಾಜ್ ಪುತ್ | Photo Credit : Facebook/UbaidullahRajpootofficial
ಹೊಸದಿಲ್ಲಿ, ಡಿ.28:ಈ ತಿಂಗಳಾರಂಭದಲ್ಲಿ ಬಹರೈನ್ ನಲ್ಲಿ ಖಾಸಗಿ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದ ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಾಜ್ ಪುತ್ ರನ್ನು ರಾಷ್ಟ್ರೀಯ ಕಬಡ್ಡಿ ಒಕ್ಕೂಟವು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ.
ಶನಿವಾರ ತುರ್ತು ಸಭೆ ನಡೆಸಿರುವ ಪಾಕಿಸ್ತಾನದ ಕಬಡ್ಡಿ ಫೆಡರೇಶನ್(PKF)ಈ ನಿರ್ಧಾರವನ್ನು ತೆಗೆದುಕೊಂಡಿದೆ. PKF ಅಥವಾ ಇತರ ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರ(NOC)ಪಡೆಯದೆ ವಿದೇಶಕ್ಕೆ ಸ್ಪರ್ಧೆಯನ್ನು ಆಡಲು ರಾಜ್ ಪುತ್ ತೆರಳಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ರಾಜ್ ಪುತ್ ಗೆ ಶಿಸ್ತು ಸಮಿತಿಯ ಮುಂದೆ ನಿರ್ಧಾರದ ಕುರಿತು ಮೇಲ್ಮನವಿ ಸಲ್ಲಿಸುವ ಹಕ್ಕಿದೆ ಎಂದು PKF ಕಾರ್ಯದರ್ಶಿ ರಾಣಾ ಸರ್ವರ್ ಹೇಳಿದ್ದಾರೆ.
ರಾಜ್ ಪುತ್ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಿದ್ದಲ್ಲದೆ, ಭಾರತೀಯ ತಂಡವನ್ನು ಪ್ರತಿನಿಧಿಸಿದ್ದರು. ಆ ತಂಡದ ಜೆರ್ಸಿಯನ್ನು ಧರಿಸಿ, ಪಂದ್ಯ ಗೆದ್ದ ನಂತರ ಭಾರತೀಯ ಧ್ವಜವನ್ನು ತನ್ನ ಹೆಗಲಿಗೇರಿಸಿಕೊಂಡಿದ್ದರು. ಈ ವಿಚಾರವನ್ನು ಒಕ್ಕೂಟ ಗಂಭೀರವಾಗಿ ಪರಿಗಣಿಸಿದೆ ಎಂದು ಸರ್ವರ್ ಹೇಳಿದ್ದಾರೆ.
ಜಿಸಿಸಿ ಕಪ್ ನಲ್ಲಿ ಭಾರತೀಯ ಜೆರ್ಸಿಯನ್ನು ಧರಿಸಿದ್ದಲ್ಲದೆ, ಭಾರತೀಯ ಧ್ವಜವನ್ನು ಬೀಸುವ ವೀಡಿಯೊಗಳು ಹಾಗೂ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ರಾಜ್ ಪುತ್ ವಿವಾದಕ್ಕೆ ಸಿಲುಕಿದ್ದರು.
ಈ ಬಗ್ಗೆ ಕ್ಷಮೆಯಾಚಿಸಿದ್ದ ರಾಜ್ ಪುತ್, ಬಹರೈನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ನನಗೆ ಆಹ್ವಾನ ನೀಡಲಾಗಿತ್ತು. ಖಾಸಗಿ ತಂಡದಲ್ಲಿ ನನ್ನನ್ನು ಸೇರಿಸಲಾಗಿತ್ತು ಎಂದು ಹೇಳಿದ್ದರು.