ʼಫೆಲೆಸ್ತೀನ್‌ನ ಪೀಲೆʼ ಎಂದೇ ಖ್ಯಾತರಾಗಿದ್ದ ಫುಟ್ಬಾಲ್ ಆಟಗಾರ ಸುಲೇಮಾನ್ ಅಲ್ ಒಬೈದ್ ಇಸ್ರೇಲ್ ದಾಳಿಯಲ್ಲಿ ಮೃತ್ಯು
ನೆರವು ವಿತರಣಾ ಕೇಂದ್ರದ ಬಳಿ ಆಹಾರಕ್ಕಾಗಿ ಕಾಯುತ್ತಿದ್ದಾಗ ದಾಳಿ ನಡೆಸಿದ ಇಸ್ರೇಲ್
Update: 2025-08-08 14:15 IST
ಸುಲೇಮಾನ್ ಅಲ್ ಒಬೈದ್ (Photo:X/@Football__Tweet)
ಗಾಝಾ : ʼಫೆಲೆಸ್ತೀನ್‌ನ ಪೀಲೆʼ ಎಂದು ಹೆಸರುಗಳಿಸಿದ್ದ ಫುಟ್ಬಾಲ್ ಆಟಗಾರ ಸುಲೇಮಾನ್ ಅಲ್ ಒಬೈದ್ ಅವರನ್ನು ಗಾಝಾದ ನೆರವು ಕೇಂದ್ರದಲ್ಲಿ ಇಸ್ರೇಲ್ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.
ʼದಕ್ಷಿಣ ಗಾಝಾದ ನೆರವು ವಿತರಣಾ ಕೇಂದ್ರದ ಬಳಿ ಆಹಾರಕ್ಕಾಗಿ ಕಾಯುತ್ತಿದ್ದ ಜನರ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಫೆಲೆಸ್ತೀನ್ ಫುಟ್ಬಾಲ್ ತಂಡದ ಮಾಜಿ ಆಟಗಾರ ಮತ್ತು ಖದಾಮತ್ ಅಲ್ ಶಾತಿ ತಂಡದ ಸ್ಟಾರ್ ಆಟಗಾರ ಅಲ್ ಒಬೈದ್ ಮೃತಪಟ್ಟಿದ್ದಾರೆʼ ಎಂದು ಫೆಲೆಸ್ತೀನ್‌ನ ಫುಟ್ಬಾಲ್ ಅಸೋಸಿಯೇಷನ್ ತಿಳಿಸಿದೆ.
ಅಲ್ ಒಬೈದ್ ಅವರ ನಿಧನದೊಂದಿಗೆ ಇಸ್ರೇಲ್ ದಾಳಿಗೆ ಗಾಝಾದಲ್ಲಿ ಮೃತಪಟ್ಟ ಕ್ರೀಡಾಪಟುಗಳು ಮತ್ತು ಅವರ ಕುಟುಂಬಸ್ಥರ ಸಂಖ್ಯೆ 662ಕ್ಕೆ ಏರಿಕೆಯಾಗಿದೆ.
ಅಲ್ ಒಬೈದ್ ಅವರು ಫೆಲೆಸ್ತೀನ್ ರಾಷ್ಟ್ರೀಯ ಫುಟ್ಬಾಲ್ ತಂಡದ ಜೊತೆ 24 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು. ಅಲ್ ಒಬೈದ್ ಪತ್ನಿ, ಐವರು ಮಕ್ಕಳನ್ನು ಅಗಲಿದ್ದಾರೆ.