×
Ad

ರಣಜಿ ಟ್ರೋಫಿಯಲ್ಲಿ ಗರಿಷ್ಠ ಶತಕ: ಎರಡನೇ ಸ್ಥಾನಕ್ಕೇರಿದ ಪರಾಸ್ ಡೋಗ್ರಾ

Update: 2025-10-16 21:17 IST

ಪರಾಸ್ ಡೋಗ್ರಾ | Photo Credit : IMRAN NISSAR

ಹೊಸದಿಲ್ಲಿ, ಅ.16: ಶ್ರೀನಗರದಲ್ಲಿ ಗುರುವಾರ ಶೇರ್-ಇ-ಕಾಶ್ಮೀರ್ ಮೈದಾನದಲ್ಲಿ ನಡೆದ ಮುಂಬೈ ತಂಡ ವಿರುದ್ಧದ ಮೊದಲ ಸುತ್ತಿನ ರಣಜಿ ಟ್ರೋಫಿ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡದ ನಾಯಕ ಪರಾಸ್ ಡೋಗ್ರಾ ತನ್ನ 32ನೇ ಶತಕ ಗಳಿಸಿದರು. ಈ ಮೂಲಕ ಪ್ರಥಮ ದರ್ಜೆ ಪಂದ್ಯಾವಳಿಯ ಇತಿಹಾಸದಲ್ಲಿ ಗರಿಷ್ಠ ಶತಕಗಳನ್ನು ಗಳಿಸಿದ 2ನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.

ಪರಾಸ್ ಅವರು ಭಾರತದ ಮಾಜಿ ಬ್ಯಾಟರ್ ಅಜಯ್ ಶರ್ಮಾರ ದಾಖಲೆಯನ್ನು ಮುರಿದರು. ಅಜಯ್ ರಣಜಿ ಟ್ರೋಫಿಯಲ್ಲಿ 31 ಶತಕಗಳನ್ನು ಗಳಿಸಿದ್ದರು. ರಣಜಿ ಸ್ಪರ್ಧಾವಳಿಯಲ್ಲಿ ಮುಂಬೈ ಆಟಗಾರ ವಸೀಂ ಜಾಫರ್(40)ಗರಿಷ್ಠ ಶತಕಗಳನ್ನು ದಾಖಲಿಸಿದ್ದಾರೆ.

ರಣಜಿಯಲ್ಲಿ ಗರಿಷ್ಠ ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ 40ರ ವಯಸ್ಸಿನ ಪರಾಸ್ ಅವರು ಜಾಫರ್ ನಂತರ 2ನೇ ಸ್ಥಾನದಲ್ಲಿದ್ದಾರೆ. ಪರಾಸ್ ಪಂದ್ಯಾವಳಿಯಲ್ಲಿ ಒಟ್ಟು 9,500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಜಾಫರ್ 12,038 ರನ್ ಕಲೆ ಹಾಕಿದ್ದಾರೆ.

ಮುಂಬೈ ವಿರುದ್ಧ ರಣಜಿ ಪಂದ್ಯದ 2ನೇ ದಿನವಾದ ಗುರುವಾರ ಆಟ ಕೊನೆಗೊಂಡಾಗ ಪರಾಸ್ 169 ಎಸೆತಗಳಲ್ಲಿ ಔಟಾಗದೆ 112 ರನ್ ಗಳಿಸಿದ್ದು, ಇದರಲ್ಲಿ 16 ಬೌಂಡರಿಗಳಿವೆ. ಜಮ್ಮು-ಕಾಶ್ಮೀರ ತಂಡವು ಮುಂಬೈನ ಮೊದಲ ಇನಿಂಗ್ಸ್ 386 ರನ್‌ಗೆ ಉತ್ತರವಾಗಿ 2 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಪರಾಸ್ ತಂಡವನ್ನು ಆಧರಿಸಿದರು.

ಪರಾಸ್ ಅವರು ಅಬ್ದುಲ್ ಸಮದ್(94 ರನ್)ಹಾಗೂ ಅಬಿದ್ ಮುಷ್ತಾಕ್(68 ರನ್)ಅವರೊಂದಿಗೆ ಕ್ರಮವಾಗಿ 4ನೇ ಹಾಗೂ 7ನೇ ವಿಕೆಟ್‌ನಲ್ಲಿ ಪ್ರಮುಖ ಜೊತೆಯಾಟದಲ್ಲಿ ಭಾಗಿಯಾಗಿ ಜಮ್ಮು-ಕಾಶ್ಮೀರ ತಂಡ ಚೇತರಿಸಿಕೊಳ್ಳುವಲ್ಲಿ ನೆರವಾದರು.

2001-02ರಲ್ಲಿ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿದ್ದ ಪರಾಸ್ ಅವರು 2018-19ರಲ್ಲಿ ಪಾಂಡಿಚೇರಿ ತಂಡ ಸೇರುವ ಮೊದಲು ದಶಕಗಳ ಕಾಲ ಹಿಮಾಚಲ ಪ್ರದೇಶ ತಂಡವನ್ನು ಪ್ರತಿನಿಧಿಸಿದ್ದರು. 2024-25ರ ಋತುವಿಗಿಂತ ಮೊದಲು ಜಮ್ಮು-ಕಾಶ್ಮೀರ ತಂಡವನ್ನು ಸೇರಿದ್ದರು. ಕಾಶ್ಮೀರ ತಂಡವನ್ನು ರಣಜಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿಸಿದ್ದರು.

*ರಣಜಿ ಟ್ರೋಫಿಯಲ್ಲಿ ಗರಿಷ್ಠ ಶತಕಗಳನ್ನು ಗಳಿಸಿದ ಆಟಗಾರರು

ವಸೀಂ ಜಾಫರ್-40 ಶತಕಗಳು

ಪರಾಸ್ ಡೋಗ್ರಾ-32 ಶತಕಗಳು

ಅಜಯ್ ಶರ್ಮಾ-31 ಶತಕಗಳು

ಅಮೋಲ್ ಮುಝುಂದಾರ್-28 ಶತಕಗಳು

ಹೃಷಿಕೇಶ್ ಕಾನಿಟ್ಕರ್-28 ಶತಕಗಳು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News