ಪ್ಯಾರಿಸ್ ಒಲಿಂಪಿಕ್ಸ್ | ಸರ್ವೇಶ್, ಅನ್ನು ರಾಣಿ, ಜ್ಯೋತಿ ಮುಂದಿನ ಸುತ್ತಿಗೇರಲು ವಿಫಲ
PC : X ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ
ಪ್ಯಾರಿಸ್ : ಹೈಜಂಪ್ ಪಟು ಸರ್ವೇಶ್ ಕುಶಾರೆ, ಜಾವೆಲಿನ್ ಎಸೆತಗಾರ್ತಿ ಅನ್ನು ರಾಣಿ ಹಾಗೂ 100 ಮೀ. ಹರ್ಡಲ್ಸ್ ಓಟಗಾರ್ತಿ ಜ್ಯೋತಿ ಯರ್ರಾಜಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮುಂದಿನ ಸುತ್ತಿಗೇರುವಲ್ಲಿ ವಿಫಲರಾಗಿದ್ದಾರೆ.
ಜ್ಯೋತಿಗೆ ರಿಪಿಚೇಜ್ ಸುತ್ತಿನಲ್ಲಿ ಮತ್ತೊಂದು ಅವಕಾಶ ಇದೆ. ಆದರೆ ಅನ್ನು ಹಾಗೂ ಸರ್ವೇಶ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ತಮ್ಮ ಪಯಣ ಅಂತ್ಯಗೊಳಿಸಿದ್ದಾರೆ.
ಹಿರಿಯ ಅಥ್ಲೀಟ್ ಅನ್ನು ರಾಣಿ 55.81 ಮೀ.ದೂರಕ್ಕೆ ಜಾವೆಲಿನ್ ಎಸೆದು ಫೈನಲ್ ತಲುಪಲು ವಿಫಲರಾದರು. ಇನ್ನೆರಡು ಪ್ರಯತ್ನಗಳಲ್ಲಿ 53.22 ಮೀ. ಹಾಗೂ 53.55 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದರೂ ಎ ಗುಂಪಿನಲ್ಲಿ 15ನೇ ಸ್ಥಾನ ಪಡೆದ 30ರ ಹರೆಯದ ಅನ್ನು ರಾಣಿ ಒಟ್ಟಾರೆ 26ನೇ ಸ್ಥಾನ ಪಡೆದರು. ಅನ್ನು ರಾಣಿ ಈ ವರ್ಷ 60.68 ಮೀ.ದೂರಕ್ಕೆ ಈಟಿ ಎಸೆದಿದ್ದರು. 63.82 ಮೀ. ಅವರ ರಾಷ್ಟ್ರೀಯ ದಾಖಲೆಯಾಗಿದೆ.
ಒಲಿಂಪಿಕ್ಸ್ ತಯಾರಿಗೆ ವಿದೇಶದಲ್ಲಿ ತರಬೇತಿ ಪಡೆದಿದ್ದರೂ ಅನ್ನು ರಾಣಿ ಅವರು ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಲು ವಿಫಲರಾದರು. ಕಳೆದ 2 ವರ್ಷಗಳಲ್ಲಿ ಎರಡು ಬಾರಿ ಮಾತ್ರ 60 ಮೀ. ದೂರಕ್ಕೆ ಈಟಿ ಎಸೆದಿರುವ ಅನ್ನು ರಾಣಿ ವರ್ಲ್ಡ್ ರ್ಯಾಂ ಕಿಂಗ್ ಕೋಟಾದ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದರು.
100 ಮೀ. ಹರ್ಡಲ್ಸ್ ನಲ್ಲಿ ಜ್ಯೋತಿ ಯರ್ರಾಜಿ ಸೆಮಿ ಫೈನಲ್ ಗೆ ಸ್ವಯಂ ಆಗಿ ಪ್ರವೇಶ ಪಡೆಯಲು ವಿಫಲರಾದರು. ತನ್ನ ಮೊದಲ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿರುವ ಜ್ಯೋತಿ 1ನೇ ಸುತ್ತಿನ ಹೀಟ್ ರೇಸ್ ನಲ್ಲಿ 13.16 ಸೆಕೆಂಡ್ ನಲ್ಲಿ ಗುರಿ ತಲುಪಿ 40 ಸ್ಪರ್ಧಿಗಳ ಪೈಕಿ 35ನೇ ಸ್ಥಾನ ಪಡೆದರು.
ಹೈಜಂಪರ್ ಸರ್ವೇಶ್ ಕುಶಾರೆ ಕೂಡ ಫೈನಲ್ ಸುತ್ತಿಗೆ ತಲುಪದೆ ನಿರಾಶಾದಾಯಕ ಪ್ರದರ್ಶನ ನೀಡಿದರು. ಅರ್ಹತಾ ಸುತ್ತಿನಲ್ಲಿ ಕೇವಲ 2.15 ಮೀ. ಎತ್ತರಕ್ಕೆ ಜಿಗಿದ ಸರ್ವೇಶ್ ಬಿ ಗುಂಪಿನಲ್ಲಿ 13ನೇ ಸ್ಥಾನ ಹಾಗೂ ಒಟ್ಟಾರೆ 25ನೇ ಸ್ಥಾನ ಪಡೆದರು.
ಇದಕ್ಕೂ ಮೊದಲು ಸೂರಜ್ ಪನ್ವಾರ್ ಹಾಗೂ ಪ್ರಿಯಾಂಕಾ ಗೋಸ್ವಾಮಿ ಅವರನ್ನೊಳಗೊಂಡ ಮಿಕ್ಸೆಡ್ ರಿಲೇ ಮ್ಯಾರಥಾನ್ ರೇಸ್ವಾಕ್ ತಂಡವು ತನ್ನ ರೇಸನ್ನು ಮುಗಿಸುವಲ್ಲಿ ವಿಫಲವಾಯಿತು. ಪ್ರಿಯಾಂಕಾ ರೇಸ್ನ 4ನೇ ಹಾಗೂ ಅಂತಿಮ ರೇಸ್ ನಲ್ಲಿ ಹೊರಬಿದ್ದರು. 41.4 ಕಿ.ಮೀ. ಕ್ರಮಿಸಿದರು