ಎರಡು ದಶಕಗಳ ವೃತ್ತಿಪರ ಬದುಕಿಗೆ ತೆರೆ ಎಳೆದ ಹಿರಿಯ ಕ್ರಿಕೆಟಿಗ ಪಿಯೂಷ್ ಚಾವ್ಲಾ
ಪಿಯೂಷ್ ಚಾವ್ಲಾ | PTI
ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಎರಡು ದಶಕಗಳ ವೃತ್ತಿಪರ ಬದುಕಿಗೆ ತೆರೆ ಎಳೆದಿದ್ದಾರೆ.
2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗಿದ್ದ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರು ಶುಕ್ರವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಇತಿಹಾಸದಲ್ಲಿ ಯಜುವೇಂದ್ರ ಚಹಾಲ್(221 ವಿಕೆಟ್), ಭುವನೇಶ್ವರ ಕುಮಾರ್(198) ಹಾಗೂ ಸುನೀಲ್ ನರೇನ್(192) ನಂತರ 4ನೇ ಗರಿಷ್ಠ ವಿಕೆಟ್ ಗಳಿಕೆದಾರನಾಗಿರುವ ಚಾವ್ಲಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ತನ್ನ ನಿರ್ಧಾರ ಪ್ರಕಟಿಸಿದರು.
‘‘ಸುಮಾರು ಎರಡು ದಶಕಗಳಿಗೂ ಅಧಿಕ ಸಮಯದ ನಂತರ ಸುಂದರ ಪಂದ್ಯಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ನನ್ನ ವೃತ್ತಿಜೀವನದುದ್ದಕ್ಕೂ ಬೆಂಬಲ ನೀಡಿರುವ ನನ್ನ ಕೋಚ್ ಗಳು, ಕುಟುಂಬ ಹಾಗೂ ಕ್ರಿಕೆಟ್ ಮಂಡಳಿಗಳಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವೆ’’ಎಂದು ಚಾವ್ಲಾ ಹೇಳಿದ್ದಾರೆ.
‘‘ಭಾರತವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರತಿನಿಧಿಸುವುದರಿಂದ ಹಿಡಿದು 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಭಾಗವಾಗುವ ತನಕ ಈ ಅದ್ಭುತ ಪ್ರಯಾಣದ ಪ್ರತಿ ಕ್ಷಣವೂ ಸ್ಮರಣೀಯ. ಈ ನೆನಪುಗಳು ನನ್ನ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ನಾನು ಕ್ರೀಸ್ ನಿಂದ ದೂರ ಸರಿದರೂ ಕ್ರಿಕೆಟ್ ಯಾವಾಗಲೂ ನನ್ನೊಂದಿಗೆ ಇರುತ್ತದೆ. ಈ ಸುಂದರ ಆಟದ ಪಾಠಗಳು ಹಾಗೂ ಚೈತನ್ಯವನ್ನು ಹೊತ್ತುಕೊಂಡು ಹೊಸ ಪ್ರಯಾಣವನ್ನು ಆರಂಭಿಸಲು ನಾನು ಈಗ ಎದುರು ನೋಡುತ್ತಿದ್ದೇನೆ’’ ಎಂದು ಚಾವ್ಲಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.
ಹಿರಿಯ ಕ್ರಿಕೆಟಿಗ ಚಾವ್ಲಾ ಹಲವು ಬಾರಿ ತಂಡಕ್ಕೆ ಪುನರಾಗಮನ ಗೈದಿದ್ದಲ್ಲದೆ ಭಾರತ ತಂಡವು 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಕೇವಲ 16ರ ವಯಸ್ಸಿನಲ್ಲಿ 2005ರ ಚಾಲೆಂಜರ್ ಟ್ರೋಫಿಯಲ್ಲಿ ಗೂಗ್ಲಿ ಮೂಲಕ ಸಚಿನ್ ತೆಂಡುಲ್ಕರ್ ರಂತಹ ಲೆಜೆಂಡ್ ಗಳನ್ನು ಔಟ್ ಮಾಡಿದ್ದ ಚಾವ್ಲಾ ವಿಶ್ವ ಮಟ್ಟದಲ್ಲಿ ಹಲವು ಬಾರಿ ಗೆಲುವಿನ ಸ್ಪೆಲ್ ಎಸೆದಿದ್ದರು.
ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ ಹಾಗೂ ರವೀಂದ್ರ ಜಡೇಜ ಅವರನ್ನೊಳಗೊಂಡ ಅಂಡರ್19 ವಿಶ್ವಕಪ್ ತಂಡದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಚಾವ್ಲಾ 2006ರಲ್ಲಿ ಮೊಹಾಲಿಯಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಚಾವ್ಲಾ ಅವರು ಗೂಗ್ಲಿ ಹಾಗೂ ಕ್ಷಿಪ್ರ ಎಸೆತಗಳ ಮಿಶ್ರಣದೊಂದಿಗೆ ಆರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದರು.
ಉತ್ತರಪ್ರದೇಶದ ಆಟಗಾರ ಚಾವ್ಲಾ ಭಾರತ ಕ್ರಿಕೆಟ್ ತಂಡದ ಪರ 3 ಟೆಸ್ಟ್, 25 ಏಕದಿನ ಹಾಗೂ 7 ಟಿ-20 ಪಂದ್ಯಗಳನ್ನು ಆಡಿದ್ದರು. ಏಕದಿನ ಕ್ರಿಕೆಟ್ ನಲ್ಲಿ 23 ರನ್‌ಗೆ 4 ವಿಕೆಟ್ ಗಳನ್ನು ಪಡೆದು ಜೀವನಶ್ರೇಷ್ಠ ಪ್ರದರ್ಶನ ನೀಡಿದ್ದರು.
2012ರಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆಗೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪುನರಾಗಮನಗೈದಿದ್ದ ಚಾವ್ಲಾ ಅವರು 2024-25ರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುವ ಮೂಲಕ ದೇಶೀಯ ಕ್ರಿಕೆಟ್ ನಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. 2025ರ ಆವೃತ್ತಿಯ ಐಪಿಎಲ್ ನಲ್ಲಿ ಆಡುವ ವಿಶ್ವಾಸದಲ್ಲಿದ್ದರು. ಆದರೆ ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಪಂದ್ಯಾವಳಿಯ ವೇಳೆ ಇಎಸ್‌ಪಿಎನ್ ಕ್ರಿಕ್ ಇನ್ ಫೋ ಕಾರ್ಯಕ್ರಮದ ಭಾಗವಾಗಿದ್ದರು.
ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಲ್ಲಿ ಚಾವ್ಲಾ ಅವರ ಪ್ರಭಾವ ಸೀಮಿತವಾಗಿದ್ದರೂ ದೇಶೀಯ ಹಾಗೂ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಗಾಢ ಪ್ರಭಾವ ಬೀರಿದ್ದರು.
ದೇಶೀಯ ಕ್ರಿಕೆಟ್ ನಲ್ಲಿ ಉತ್ತರ ಪ್ರದೇಶ ಹಾಗೂ ಗುಜರಾತ್ ತಂಡವನ್ನು ಪ್ರತಿನಿಧಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 137
ಪಂದ್ಯಗಳಲ್ಲಿ 446 ವಿಕೆಟ್ ಗಳನ್ನು ಹಾಗೂ ಟಿ-20 ಕ್ರಿಕೆಟ್ ನಲ್ಲಿ 319 ವಿಕೆಟ್ ಗಳನ್ನು ಉರುಳಿಸಿದ್ದರು. ಉತ್ತರಪ್ರದೇಶ ಹಾಗೂ 2012 ಹಾಗೂ 2014ರಲ್ಲಿ ಐಪಿಎಲ್ ಪ್ರಶಸ್ತಿ ಜಯಿಸಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ಪರ ಸ್ಥಿರ ಪ್ರದರ್ಶನ ನೀಡಿದ್ದರು.
38ರ ಹರೆಯದ ಚಾವ್ಲಾ ಅವರು ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪರವಾಗಿ 192 ಪಂದ್ಯಗಳಲ್ಲಿ ಆಡುವುದರೊಂದಿಗೆ ಒಟ್ಟು 192 ವಿಕೆಟ್ ಗಳನ್ನು ಉರುಳಿಸಿದ್ದರು. 2024ರಲ್ಲಿ ಐಪಿಎಲ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಆಗ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ತನ್ನ ವೃತ್ತಿಜೀವನದಲ್ಲಿ ನಿರ್ದಿಷ್ಟವಾಗಿ ಐಪಿಎಲ್‌ನಲ್ಲಿ ಮಹತ್ವದ ಸಾಧನೆ ಮಾಡಿದ್ದ ಚಾವ್ಲಾ ಈ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಸ್ಪಿನ್ ಬೌಲರ್‌ಗಳ ಪೈಕಿ ಒಬ್ಬರಾಗಿದ್ದರು. ಒತ್ತಡದಲ್ಲೂ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದ ಚಾವ್ಲಾ ಅವರು ವಿವಿಧ ಫ್ರಾಂಚೈಸಿಗಳು ಹಲವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.