×
Ad

ಚೆಸ್ ವಿಶ್ವ ರ್‍ಯಾಂಕಿಂಗ್‌ ನಲ್ಲಿ ನಂ. 3 ಗೆ ಏರಿದ ಪ್ರಜ್ಞಾನಂದ

ಇತಿಹಾಸ ಸೃಷ್ಟಿಸಿದ ಭಾರತೀಯ ಎಳೆಯ ಪ್ರತಿಭೆ

Update: 2025-08-20 22:19 IST

ಪ್ರಜ್ಞಾನಂದ | PC : @rpraggnachess

ಸೇಂಟ್ ಲೂಯಿಸ್ (ಅಮೆರಿಕ), ಆ. 20: ಭಾರತೀಯ ಚೆಸ್ ಪ್ರತಿಭೆ ಆರ್. ಪ್ರಜ್ಞಾನಂದ ತನ್ನ ವೃತ್ತಿ ಜೀವನದಲ್ಲಿ ಇನ್ನೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಮೆರಿಕದ ಮಿಝೂರಿ ರಾಜ್ಯದ ಸೇಂಟ್ ಲೂಯಿಸ್ ನಗರದಲ್ಲಿ ನಡೆಯುತ್ತಿರುವ ಸಿಂಕ್‌ಫೀಲ್ಡ್ ಕಪ್ ಚೆಸ್ ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್ ಡಿ. ಗುಕೇಶ್‌ರನ್ನು ಸೋಲಿಸಿ ಲೈವ್ ವಿಶ್ವ ರ್‍ಯಾಂಕಿಂಗ್‌ ನಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ.

ಈ ವಿಜಯದೊಂದಿಗೆ 20 ವರ್ಷದ ಗ್ರ್ಯಾಂಡ್ ಮಾಸ್ಟರ್ ಲೈವ್ ರೇಟಿಂಗ್‌ ನಲ್ಲಿ 2784.1 ಅಂಕಗಳನ್ನು ಗಳಿಸಿದ್ದಾರೆ. 2839 ಅಂಕಗಳನ್ನು ಹೊಂದಿರುವ ಮ್ಯಾಗ್ನಸ್ ಕಾರ್ಲ್‌ಸನ್ ಮೊದಲ ಸ್ಥಾನದಲ್ಲಿದ್ದರೆ, 2807 ಅಂಕಗಳನ್ನು ಗಳಿಸಿರುವ ಹಿಕರು ನಕಮುರ ಎರಡನೇ ಸ್ಥಾನ ಪಡೆದಿದ್ದಾರೆ.

ಪಂದ್ಯಾವಳಿಯಲ್ಲಿ ಪ್ರಜ್ಞಾನಂದ ಅಮೆರಿಕದ ಲೆವನ್ ಆ್ಯರನ್ಯನ್ ಜೊತೆಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಲೆವನ್ ತನ್ನ ಉಝ್ಬೆಕಿಸ್ತಾನದ ಎದುರಾಳಿ ನೊಡಿರ್ಬೆಕ್ ಅಬ್ದುಸತ್ತೊರೊವ್‌ ರನ್ನು ಪರಾಭವಗೊಳಿಸಿದರು.

ಉಳಿದ ಮೊದಲ ಸುತ್ತಿನ ಪಂದ್ಯಗಳಲ್ಲಿ ಫಬಿಯಾನೊ ಕರುವಾನ ಪೋಲ್ಯಾಂಡ್‌ ನ ಜಾನ್-ಕ್ರಿಸ್ಟೋಫ್ ಡೂಡರನ್ನು ಸೋಲಿಸಿದರೆ, ಸ್ಯಾಮುಯೆಲ್ ಸೆವಿಯನ್, ವೆಸ್ಲಿ ಸೊ ಜೊತೆಗೆ ಡ್ರಾ ಸಾಧಿಸಿದರು. ಫ್ರಾನ್ಸ್ ಆಟಗಾರರಾದ ಮ್ಯಾಕ್ಸಿಮ್ ವಚಿಯರ್ ಲಗ್ರಾವ್ ಮತ್ತು ಅಲಿರೆಝ ಫಿರೂಝ ನಡುವಿನ ಪಂದ್ಯವೂ ಡ್ರಾಗೊಂಡಿತು.

3,50,000 ಡಾಲರ್ (ಸುಮಾರು 3.06 ಕೋಟಿ ರೂಪಾಯಿ) ಬಹುಮಾನ ಮೊತ್ತದ ಸಿಂಕ್‌ ಫೀಲ್ಡ್ ಕಪ್‌ ನಲ್ಲಿ ಇನ್ನೂ ಎಂಟು ಸುತ್ತುಗಳಿವೆ. ಈ ಹಂತದಲ್ಲಿ ಆರು ಆಟಗಾರರು ಎರಡನೇ ಸ್ಥಾನದಲ್ಲಿ ಸಮಬಲದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News