×
Ad

ಪಂಜಾಬ್ ಕಿಂಗ್ಸ್‌‌ನ ಸಹ ಮಾಲಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರೀತಿ ಝಿಂಟಾ

Update: 2025-05-23 14:11 IST

ಪ್ರೀತಿ ಝಿಂಟಾ (Photo: PTI)

ಚಂಡೀಗಢ: ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲಕಿ ಪ್ರೀತಿ ಝಿಂಟಾ ಅವರು ತಮ್ಮ ಸಹ ನಿರ್ದೇಶಕರಾದ ಮೋಹಿತ್ ಬರ್ಮನ್ ಹಾಗೂ ನೆಸ್ ವಾಡಿಯಾ ವಿರುದ್ಧ ಚಂಡೀಗಢದ ನ್ಯಾಯಾಲಯವೊಂದರಲ್ಲಿ ಕಾನೂನು ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿದೆ.

ಎಪ್ರಿಲ್ 21ರಂದು ನಡೆದ ಪಂಜಾಬ್ ಕಿಂಗ್ಸ್ ತಂಡದ ಮಾಲಕತ್ವ ಸಂಸ್ಥೆಯಾದ ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್‌ನ ಎಕ್ಸ್ಟಾರ್ಡಿನರಿ ಸಾಮಾನ್ಯ ಸಭೆಯ (EGM) ಬದ್ಧತೆಯನ್ನು ಪ್ರಶ್ನಿಸಿ ಅವರು ಈ ಮೊಕದ್ದಮೆ ಹೂಡಿದ್ದಾರೆ. ಈ ಸಭೆಯನ್ನು ಕಂಪನಿ ಕಾಯ್ದೆ, 2013ರ ಅಡಿಯ ಸೂಕ್ತ ನಿಯಮಾವಳಿಗಳು ಹಾಗೂ ಇನ್ನಿತರ ಕಾರ್ಯಕಾರಿ ನಿಯಮಗಳನ್ವಯ ನಡೆಸಿಲ್ಲ ಎಂದು ಅವರು ತಮ್ಮ ಮೊಕದ್ದಮೆಯಲ್ಲಿ ಆರೋಪಿಸಿದ್ದಾರೆ.

ಪ್ರೀತಿ ಝಿಂಟಾ, ಮೋಹಿತ್ ಬರ್ಮನ್ ಹಾಗೂ ನೆಸ್ ವಾಡಿಯಾ ಪಂಜಾಬ್ ಕಿಂಗ್ಸ್ ಐಪಿಎಲ್ ತಂಡದ ಮಾಲಕತ್ವ ಸಂಸ್ಥೆಯಾದ ಕೆಪಿಎಚ್ ಡ್ರೀಮ್ ಕ್ರಿಕೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಎಪ್ರಿಲ್ 10ರಂದು ನಾನು ಸಭೆ ನಡೆಸದಂತೆ ಆಕ್ಷೇಪಿಸಿ ಇಮೇಲ್ ರವಾನಿಸಿದ್ದೆ. ಆದರೆ, ಈ ಆಕ್ಷೇಪಗಳನ್ನು ನಿರ್ಲಕ್ಷಿಸಲಾಗಿದ್ದು, ನೆಸ್ ವಾಡಿಯಾರ ಬೆಂಬಲದೊಂದಿಗೆ ಮೋಹಿತ್ ಬರ್ಮನ್ ಸಭೆ ನಡೆಸುವ ನಿರ್ಧಾರದೊಂದಿಗೆ ಮುನ್ನಡೆದರು ಎಂದು ಪ್ರೀತಿ ಝಿಂಟಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಈ ಸಭೆಯಲ್ಲಿ ಪ್ರೀತಿ ಝಿಂಟಾ ಹಾಗೂ ಮತ್ತೊಬ್ಬ ನಿರ್ದೇಶಕ ಕರಣ್ ಪೌಲ್ ಕೂಡಾ ಭಾಗವಹಿಸಿದ್ದರಾದರೂ, ಈ ಸಭೆಯನ್ನು ಅನೂರ್ಜಿತವೆಂದು ಘೋಷಿಸುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ನಾನು ಹಾಗೂ ಮತ್ತೊಬ್ಬ ನಿರ್ದೇಶಕ ಕರಣ್ ಪೌಲ್ ಅವರು ವಿರೋಧ ವ್ಯಕ್ತಪಡಿಸಿದರೂ, ಮುನೀಶ್ ಖನ್ನಾರನ್ನು ಮತ್ತೊಬ್ಬ ನಿರ್ದೇಶಕರನ್ನಾಗಿ ಮಾಡಿರುವುದು ನನಗೆ ಕಳವಳವನ್ನುಂಟು ಮಾಡಿದೆ ಎಂದೂ ಅವರು ತಮ್ಮ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News