ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯ ನಿವೃತ್ತಿ ಚರ್ಚೆ: ಆರ್.ಅಶ್ವಿನ್ ಹೇಳಿದ್ದೇನು?
ರವಿಚಂದ್ರನ್ ಅಶ್ವಿನ್ (File Photo: PTI)
ಹೊಸದಿಲ್ಲಿ: ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತಾದ ವದಂತಿಗಳ ಬಗ್ಗೆ ಮಾಜಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರತಿಕ್ರಿಯಿಸಿದ್ದು , ಈ ಚರ್ಚೆಯ ಸಮಯವನ್ನು ಪ್ರಶ್ನಿಸಿದ್ದಾರೆ. 2027ರ ಏಕದಿನ ವಿಶ್ವಕಪ್ ಗಿಂತ ಮುಂಚಿತವಾಗಿ ಈ ಹಿರಿಯ ಆಟಗಾರರನ್ನು ಹೊರಗಿಡಲು ಆಯ್ಕೆಗಾರರು ಬಯಸಿದ್ದರೆ, ಆ ನಿರ್ಧಾರವನ್ನು ಸಾಕಷ್ಟು ಮೊದಲೇ ತಿಳಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ, 2027ರ ವಿಶ್ವಕಪ್ ಗೂ ಮುನ್ನ ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅವರನ್ನು ಭಾರತದ ಏಕದಿನ ಯೋಜನೆಯಿಂದ ಕೈಬಿಡಬಹುದು ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಲಾರ್ಡ್ಸ್ ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯವು ರೋಹಿತ್ ಅವರ ಕೊನೆಯ ಪಂದ್ಯವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ.
ತಮ್ಮ ಯೂಟ್ಯೂಬ್ ಚಾನೆಲ್ 'ಆಶ್ ಕಿ ಬಾತ್'ನಲ್ಲಿ ಮಾತನಾಡಿರುವ ಅಶ್ವಿನ್, ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತಕ್ಕೆ ರೋಹಿತ್ ಮತ್ತು ವಿರಾಟ್ ಅವರ ಅನುಭವದ ಅಗತ್ಯವಿದೆ ಎಂದು ಹೇಳಿದ್ದಾರೆ.
ಆದರೆ, ತಂಡದ ಆಡಳಿತ ಅವರನ್ನು ಕೈಬಿಡಲು ನಿರ್ಧರಿಸಿದ್ದರೆ ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣವೇ ಆಟಗಾರರಿಗೆ ತಿಳಿಸಬೇಕಾಗಿತ್ತು. ಇದರಿಂದ ಈ ಅನಿಶ್ಚಿತತೆ ಮುಂದುವರಿಯುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
“ವೈಯಕ್ತಿಕ ಅಭಿಪ್ರಾಯದಲ್ಲಿ , ಅವರ ಅನುಭವದ ಅಗತ್ಯವಿದೆ ಎಂದು ಹೇಳುತ್ತೇನೆ. ಯಶಸ್ವಿ ಜೈಸ್ವಾಲ್ ತೀವ್ರ ಪೈಪೋಟಿ ನೀಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ 2027 ರ ವಿಶ್ವಕಪ್ ನಲ್ಲಿ ನಮಗೆ ಈ ಆಟಗಾರರು ಬೇಡ ಎಂದು ಒಬ್ಬ ಆಯ್ಕೆಗಾರ, ತರಬೇತುದಾರ ಅಥವಾ ನಾಯಕನಿಗೆ ಎಂದಾದರೂ ಅನಿಸಿದ್ದರೆ, ನೀವು ಅದನ್ನು ಚಾಂಪಿಯನ್ಸ್ ಟ್ರೋಫಿಯ ಕೊನೆಯಲ್ಲಿ ತಿಳಿಸಬಹುದಿತ್ತು" ಎಂದು ಅಶ್ವಿನ್ ಹೇಳಿದ್ದಾರೆ.
ಕ್ರಿಕೆಟ್ ವಿಶ್ವಕಪ್ ಗೆ ಕೇವಲ 10 ರಿಂದ 12 ತಿಂಗಳುಗಳು ಬಾಕಿ ಇರುವಾಗ, ಇಂತಹ ಚರ್ಚೆಗಳ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪಿಟಿಐ ಗೆ ಪ್ರತಿಕ್ರಿಯಿಸಿ, ರೋಹಿತ್ ಅವರು ಏಕದಿನ ಕ್ರಿಕೆಟ್ ನಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ ಎಂದು ಖಚಿತಪಡಿಸಿದ್ದು, ನಿವೃತ್ತಿಯ ವದಂತಿಗಳು ಸುಳ್ಳು ಎಂದು ಹೇಳಿದ್ದಾರೆ.