×
Ad

ಶ್ರೀಲಂಕಾ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಆರ್.ಶ್ರೀಧರ್ ನೇಮಕ

2014ರಿಂದ 2021ರ ತನಕ ಭಾರತದ ಫೀಲ್ಡಿಂಗ್ ಕೋಚ್ ಆಗಿದ್ದ ಶ್ರೀಧರ್

Update: 2025-12-17 23:01 IST

ಆರ್.ಶ್ರೀಧರ್ | Photo Credit : officialslc

ಕೊಲಂಬೊ, ಡಿ.17: ರಾಷ್ಟ್ರೀಯ ತಂಡದ ಫೀಲ್ಡಿಂಗ್ ಕೋಚ್ ಆಗಿ ಆರ್.ಶ್ರೀಧರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ. ಶ್ರೀಧರ್ ಅವರೊಂದಿಗಿನ ಒಪ್ಪಂದ 2026ರ ಪುರುಷರ ಟಿ-20 ವಿಶ್ವಕಪ್ ಅಂತ್ಯದ ತನಕ ಇರಲಿದೆ.

ಶ್ರೀಧರ್ ನೇಮಕವು ಡಿ.11ರಿಂದ ಚಾಲ್ತಿಗೆ ಬರಲಿದ್ದು ಮಾರ್ಚ್ 10ರಂದು ಟಿ-20 ವಿಶ್ವಕಪ್ ಟೂರ್ನಿಯ ಮುಕ್ತಾಯದ ಬೆನ್ನಿಗೇ ಒಪ್ಪಂದ ಅಂತ್ಯವಾಗಲಿದೆ. ಜಾಗತಿಕ ಟಿ-20 ಪಂದ್ಯಾವಳಿಯನ್ನು ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ.

ಬಿಸಿಸಿಐನ ಲೆವೆಲ್-3 ಕ್ವಾಲಿಫೈಯ್ಡ್ ಕೋಚ್ ಆಗಿರುವ ಶ್ರೀಧರ್ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಈ ಹಿಂದೆ ಅವರು 2014ರಿಂದ 2021ರ ತನಕ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು. 300ಕ್ಕೂ ಅಧಿಕ ಅಂತರ್‌ ರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರು. ಎರಡು ಏಕದಿನ ವಿಶ್ವಕಪ್ ಹಾಗೂ ಎರಡು ಟಿ-20 ವಿಶ್ವಕಪ್‌ ಗಳಲ್ಲೂ ಭಾರತ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿದ್ದರು.

ಶ್ರೀಧರ್ ಅವರು ಶ್ರೀಲಂಕಾ ತಂಡದ ಸಮಗ್ರ ಫೀಲ್ಡಿಂಗ್ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಲಿದ್ದಾರೆ. ಟಿ-20 ವಿಶ್ವಕಪ್‌ಗೆ ಸಂಪೂರ್ಣ ತಯಾರಿ ನಡೆಸಲು ಮುಂಬರುವ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಶ್ರೀಲಂಕಾ ತಂಡದಲ್ಲಿ ಕೆಲಸ ಮಾಡಲಿದ್ದಾರೆ.

ಶ್ರೀಧರ್ ಕಳೆದ ವರ್ಷ ಸ್ವಲ್ಪ ಸಮಯ ಅಫ್ಘಾನಿಸ್ತಾನದ ತಂಡದ ಕೋಚ್ ಆಗಿದ್ದರು. ನ್ಯೂಝಿಲ್ಯಾಂಡ್ ವಿರುದ್ಧ ನೊಯ್ಡಾದಲ್ಲಿ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಹಾಗೂ ಸೆಪ್ಟಂಬರ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಫ್ಘಾನಿಸ್ತಾನದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News