×
Ad

ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಬಿರುಕಿಲ್ಲ: ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ

Update: 2025-04-18 20:59 IST

ರಾಹುಲ್ ದ್ರಾವಿಡ್ | PC : PTI 

ಜೈಪುರ : ತಂಡದಲ್ಲಿ ಬಿರುಕು ಮೂಡಿದೆ ಎಂಬ ಊಹಾಪೋಹಗಳನ್ನು ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ನಿರಾಕರಿಸಿದ್ದಾರೆ. ನಾನು ಮತ್ತು ನಾಯಕ ಸಂಜು ಸ್ಯಾಮ್ಸನ್ ಒಗ್ಗಟ್ಟಿನಿಂದ ಇದ್ದೇವೆ ಎಂದು ಅವರು ಹೇಳಿದರು.

ಎಪ್ರಿಲ್ 16ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಬಳಿಕ, ರಾಜಸ್ಥಾನ ರಾಯಲ್ಸ್ ಪಾಳಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಬಗ್ಗೆ ಊಹಾಪೋಹಗಳು ಎದ್ದಿದ್ದವು.

ಆದರೆ, ಈ ವರದಿಗಳನ್ನು ತಳ್ಳಿ ಹಾಕಿದ ದ್ರಾವಿಡ್, ‘‘ಸಂಜು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದಾರೆ. ನಾನು ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನಾವು ಮಾಡುವ ಪ್ರತಿಯೊಂದು ಚರ್ಚೆ ಮತ್ತು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲಿ ಅವರು ಭಾಗಿಯಾಗುತ್ತಾರೆ’’ ಎಂದು ದ್ರಾವಿಡ್ ನುಡಿದರು.

ರಾಜಸ್ಥಾನ ರಾಯಲ್ಸ್ 2025ರ ಐಪಿಎಲ್ ಋತುವಿನಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲವಾಗಿದೆ. ಅದು ಏಳು ಪಂದ್ಯಗಳಿಂದ ಕೇವಲ ಎರಡು ಗೆಲುವುಗಳನ್ನು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಆದರೆ, ಪರಿಸ್ಥಿತಿಯನ್ನು ಬದಲಿಸಿ ಪ್ಲೇಆಫ್‌ಗೆ ಪ್ರವೇಶ ಪಡೆಯುವಲ್ಲಿ ತಂಡವು ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವನ್ನು ರಾಹುಲ್ ದ್ರಾವಿಡ್ ವ್ಯಕ್ತಪಡಿಸಿದರು. ಅದೇ ವೇಳೆ, ಇನಿಂಗ್ಸ್ ಅಂತ್ಯದ ಬೌಲಿಂಗ್‌ನಲ್ಲಿ ಸಮಸ್ಯೆ ಇದೆ ಎನ್ನುವುದನ್ನು ಅವರು ಒಪ್ಪಿಕೊಂಡರು.

‘‘ಪಂದ್ಯಗಳನ್ನು ಸೋಲುವಾಗ ಮತ್ತು ಪರಿಸ್ಥಿತಿ ನಿರೀಕ್ಷೆಯಂತೆ ಸಾಗದೇ ಇರುವಾಗ ನಾವು ಟೀಕೆಗಳನ್ನು ಎದುರಿಸುತ್ತೇವೆ. ನಮ್ಮ ನಿರ್ವಹಣೆ ಚೆನ್ನಾಗಿಲ್ಲ ಎನ್ನುವ ಟೀಕೆಗಳನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ. ಅದರ ಬಗ್ಗೆ ನಾವು ಯೋಚಿಸಬಹುದು. ಆದರೆ, ಇಂಥ ಆಧಾರರಹಿತ ವರದಿಗಳ ಬಗ್ಗೆ ನಾವು ಏನೂ ಮಾಡುವಂತಿಲ್ಲ’’ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News