ಮಧ್ಯಪ್ರದೇಶ | ಎಲ್ಲಾ ಮಾದರಿಯ ಕ್ರಿಕೆಟಿಗೆ ರಜತ್ ಪಾಟಿದಾರ್ ನಾಯಕ
ರಜತ್ ಪಾಟಿದಾರ್ | Photo Credit : PTI
ಇಂದೋರ್, ಅ.7: 2025-26ರ ದೇಶೀಯ ಋತು ಆರಂಭಕ್ಕೆ ಮೊದಲು ರಜತ್ ಪಾಟಿದಾರ್‌ಗೆ ಮಧ್ಯಪ್ರದೇಶದ ಎಲ್ಲಾ ಮಾದರಿ ಕ್ರಿಕೆಟ್ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.
ಅಕ್ಟೋಬರ್ 25ರಂದು ರಣಜಿ ಟ್ರೋಫಿ ಟೂರ್ನಿಯ ಮೂಲಕ ದೇಶೀಯ ಋತು ಆರಂಭವಾಗಲಿದೆ.
ಐಪಿಎಲ್ ಹಾಗೂ ದುಲೀಪ್ ಟ್ರೋಫಿಯಲ್ಲಿ ಯಶಸ್ಸು ಕಂಡಿರುವ ಪಾಟಿದಾರ್‌ರನ್ನು ಶುಭಂ ಶರ್ಮಾ ಬದಲಿಗೆ ಮಧ್ಯಪ್ರದೇಶ ಕ್ರಿಕೆಟ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.
32ರ ಹರೆಯದ ಪಾಟಿದಾರ್ ಕಳೆದ ವರ್ಷ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮೊದಲ ಬಾರಿ ನಾಯಕನಾಗಿ ಆಯ್ಕೆಯಾಗಿದ್ದರು. ತನ್ನ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡಿದ್ದ ಪಾಟಿದಾರ್ ಮಧ್ಯಪ್ರದೇಶ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು. ಆದರೆ ಫೈನಲ್‌ನಲ್ಲಿ ಮುಂಬೈ ತಂಡದ ವಿರುದ್ಧ ಸೋತಿದ್ದರು.
ಆರ್‌ಸಿಬಿ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾರಥ್ಯ ವಹಿಸಿದ್ದ ಪಾಟಿದಾರ್ ಅವರು ಕೇಂದ್ರ ವಲಯವು 2014-15ರ ನಂತರ ಮೊದಲ ಬಾರಿ ದುಲೀಪ್ ಟ್ರೋಫಿ ಜಯಿಸಲೂ ನೆರವಾಗಿದ್ದರು.
ಪಾಟಿದಾರ್ ಕಳೆದ ವಾರ ನಾಗಪುರದಲ್ಲಿ ನಡೆದ ಇರಾನಿ ಕಪ್‌ನಲ್ಲಿ ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್ ಹಾಗೂ ಅಭಿಮನ್ಯು ಈಶ್ವರನ್ ಸಹಿತ ಹಲವು ಪ್ರಮುಖ ಆಟಗಾರರಿದ್ದ ಶೇಷ ಭಾರತ ತಂಡವನ್ನು ಮುನ್ನಡೆಸಿದ್ದರು. ಇರಾನಿ ಕಪ್ ಪಂದ್ಯದಲ್ಲಿ ಶೇಷ ಭಾರತ ತಂಡವು ವಿದರ್ಭ ವಿರುದ್ಧ 93 ರನ್‌ಗಳಿಂದ ಸೋತಿತ್ತು.
2024-25ರ ರಣಜಿ ಋತುವಿನಲ್ಲಿ ಪಾಟಿದಾರ್ 48.09ರ ಸರಾಸರಿಯಲ್ಲಿ 11 ಇನಿಂಗ್ಸ್‌ಗಳಲ್ಲಿ 529 ರನ್ ಗಳಿಸಿದ್ದರು. ಇದರಲ್ಲಿ 1 ಶತಕ ಹಾಗೂ 2 ಅರ್ಧಶತಕಗಳಿದ್ದವು. ಕಳೆದ ವರ್ಷ ಶುಭಂ(943 ರನ್)ನಂತರ ಮಧ್ಯಪ್ರದೇಶದ ಪರ 2ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.
ಈ ವರ್ಷ ಪಾಟಿದಾರ್ ಅವರು 7 ಇನಿಂಗ್ಸ್‌ಗಳಲ್ಲಿ 2 ಶತಕ ಹಾಗೂ 3 ಅರ್ಧಶತಕಗಳನ್ನು ಗಳಿಸಿದ್ದರು. ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಶತಕ ಗಳಿಸಿದ್ದ ಪಾಟಿದಾರ್ ಕೇಂದ್ರ ವಲಯ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಪಡೆದು ದಕ್ಷಿಣ ವಲಯ ವಿರುದ್ಧ 6 ವಿಕೆಟ್‌ನಿಂದ ಗೆಲ್ಲುವಲ್ಲಿ ನೆರವಾಗಿದ್ದರು.
ಮಧ್ಯಪ್ರದೇಶ ತಂಡವು ಇಂದೋರ್‌ನಲ್ಲಿ ಪಂಜಾಬ್ ವಿರುದ್ಧ ಆಡುವ ಮೂಲಕ ತನ್ನ ರಣಜಿ ಅಭಿಯಾನ ಆರಂಭಿಸಲಿದೆ.