×
Ad

ರಣಜಿ ಟ್ರೋಫಿ: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಗಳಿಸಿದ ರಜತ್ ಪಾಟಿದಾರ್

Update: 2025-10-17 21:45 IST

ರಜತ್ ಪಾಟಿದಾರ್ | Photo Credit : PTI

ಹೊಸದಿಲ್ಲಿ, ಅ.17: ಮಧ್ಯಪ್ರದೇಶ ಕ್ರಿಕೆಟ್ ತಂಡದ ನಾಯಕ ರಜತ್ ಪಾಟಿದಾರ್ ಶುಕ್ರವಾರ ಇಂದೋರ್‌ನಲ್ಲಿ ನಡೆದ ಪಂಜಾಬ್ ವಿರುದ್ಧದ 2025-26ರ ಆವೃತ್ತಿಯ ರಣಜಿ ಟ್ರೋಫಿ ಪಂದ್ಯದ ವೇಳೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ನ ಚೊಚ್ಚಲ ದ್ವಿಶತಕ ದಾಖಲಿಸಿದರು.

ಇತ್ತೀಚೆಗೆ ಮಧ್ಯಪ್ರದೇಶ ತಂಡದ ಎಲ್ಲ ಮಾದರಿ ಕ್ರಿಕೆಟ್ ನಾಯಕನಾಗಿ ನೇಮಕಗೊಂಡಿರುವ ಪಾಟಿದಾರ್ ತನ್ನ ಇನಿಂಗ್ಸ್‌ನಲ್ಲಿ 328ನೇ ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಈ ಸಾಧನೆಯ ಮೂಲಕ ಅವರು ತನ್ನ ಹಿಂದಿನ ಪ್ರಥಮ ದರ್ಜೆ ಸ್ಕೋರ್(196)ಉತ್ತಮ ಪಡಿಸಿಕೊಂಡರು. 2018ರ ರಣಜಿ ಋತುವಿನಲ್ಲಿ ತಮಿಳುನಾಡು ವಿರುದ್ಧ ಪಾಟಿದಾರ್ 196 ರನ್ ಗಳಿಸಿದ್ದರು.

ಮಧ್ಯಪ್ರದೇಶ ತಂಡವು 155 ರನ್‌ಗೆ 4ನೇ ವಿಕೆಟ್ ಕಳೆದುಕೊಂಡಿದ್ದಾಗ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ 32ರ ಹರೆಯದ ಬ್ಯಾಟರ್ ಪಾಟಿದಾರ್, ವೆಂಕಟೇಶ್ ಅಯ್ಯರ್ ಜೊತೆಗೂಡಿ ನಿರ್ಣಾಯಕ ಶತಕದ ಜೊತೆಯಾಟ ನಡೆಸಿದರು. ಈ ಮೂಲಕ ಆತಿಥೇಯ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ, ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಒದಗಿಸಿಕೊಟ್ಟರು.

ದ್ವಿಶತಕವನ್ನು ಗಳಿಸುವ ಮೂಲಕ 2025ರಲ್ಲಿ ಪಾಟಿದಾರ್ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಮೊದಲ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ನಾಯಕತ್ವವಹಿಸಿದ್ದ ಪಾಟಿದಾರ್ ಕೇಂದ್ರ ವಲಯ ತಂಡ ದಶಕದ ನಂತರ ಮೊದಲ ಬಾರಿ ದುಲೀಪ್ ಟ್ರೋಫಿ ಗೆಲ್ಲುವಲ್ಲಿಯೂ ನೇತೃತ್ವವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News