×
Ad

ರಣಜಿ: ಕರ್ನಾಟಕ, ಮುಂಬೈ ತಂಡ ನಾಕೌಟ್‌ಗೆ ಅರ್ಹತೆ ಗಿಟ್ಟಿಸಲಿವೆಯೇ?

Update: 2025-01-26 21:58 IST

 Photo Credit: The Hindu

ಹೊಸದಿಲ್ಲಿ : ರಣಜಿ ಟ್ರೋಫಿ 2024-25ರ ಋತುವಿನ ಗ್ರೂಪ್ ಹಂತದ 7ನೇ ಹಾಗೂ ಕೊನೆಯ ಸುತ್ತು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಪ್ರಮುಖ ತಂಡಗಳಾದ ಮುಂಬೈ ಹಾಗೂ ಕರ್ನಾಟಕ ಅಂತಿಮ-8ರ ಹಂತದಲ್ಲಿ ಇನ್ನೂ ಸ್ಥಾನ ಪಡೆದಿಲ್ಲ.

ಅಜಿಂಕ್ಯರಹಾನೆ ನೇತೃತ್ವದ ಮುಂಬೈ ತಂಡ ಜಮ್ಮು-ಕಾಶ್ಮೀರ ವಿರುದ್ಧದ 6ನೇ ಸುತ್ತಿನ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿ ಹಿನ್ನಡೆ ಕಂಡಿದೆ. ನಾಕೌಟ್ ಹಂತಕ್ಕೇರುವ ಮುಂಬೈ ತಂಡದ ಅವಕಾಶಕ್ಕೆ ಧಕ್ಕೆ ಯಾಗಿದೆ.

ಇದೇ ವೇಳೆ, ಕರ್ನಾಟಕ ತಂಡವು ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿ ಬೋನಸ್ ಅಂಕ ಪಡೆದಿದ್ದರೂ ಅದರ ಕ್ವಾರ್ಟರ್ ಫೈನಲ್ ಸ್ಥಾನ ಇನ್ನೂ ಖಾತ್ರಿಯಾಗಿಲ್ಲ.

ಈ ತನಕ ಸಿ ಗುಂಪಿನಲ್ಲಿರುವ ವಿದರ್ಭ ತಂಡ ಮಾತ್ರ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿದೆ. ಎ,ಬಿ,ಸಿ,ಡಿ ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಎ ಗುಂಪಿನಲ್ಲಿ ಜಮ್ಮು-ಕಾಶ್ಮೀರ(29 ಅಂಕ), ಬರೋಡಾ(24 ಅಂಕ)ಹಾಗೂ ಮುಂಬೈ(22 ಅಂಕ)ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿವೆ. ಕಾಶ್ಮೀರ ತನ್ನ ಕೊನೆಯ ಪಂದ್ಯದಲ್ಲಿ ಬರೋಡಾವನ್ನು ಎದುರಿಸಲಿದ್ದು, ಈ ಪಂದ್ಯದ ವಿಜೇತ ತಂಡ ಮುಂದಿನ ಸುತ್ತಿಗೇರಲಿದೆ. ಬರೋಡಾ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ 3 ಅಂಕ ಗಳಿಸಿದರೆ, ಮುಂಬೈ ತಂಡ ಒಂದೊಮ್ಮೆ ಬೋನಸ್ ಅಂಕದಿಂದ ಗೆದ್ದರೆ ಬರೋಡಾ ಮುಂದಿನ ಸುತ್ತಿಗೇರದು. ಮುಂಬೈ ಮುಂದಿನ ಪಂದ್ಯದಲ್ಲಿ ಮೇಘಾಲಯವನ್ನು ಎದುರಿಸಲಿದ್ದು, ಈ ಪಂದ್ಯವನ್ನು ಅದು ಗೆಲ್ಲಬೇಕಾಗಿದೆ. ಬರೋಡಾ ತಂಡವು ಕಾಶ್ಮೀರ ತಂಡವನ್ನು ಸೋಲಿಸಿದರೆ, ಮುಂಬೈ ತಂಡ ಬೋನಸ್ ಅಂಕದಿಂದ ಗೆಲ್ಲಬೇಕಾಗುತ್ತದೆ. ಆಗ ಬರೋಡಾ ಹಾಗೂ ಮುಂಬೈ ಮುಂದಿನ ಸುತ್ತಿಗೇರಲಿವೆ.

ಸಿ ಗುಂಪಿನಲ್ಲಿ ಹರ್ಯಾಣ(26 ಅಂಕ)ಅಗ್ರ ಸ್ಥಾನದಲ್ಲಿದೆ. ಆ ನಂತರ ಕೇರಳ(21 ಅಂಕ)ಹಾಗೂ ಕರ್ನಾಟಕ(19 ಅಂಕ)ತಂಡಗಳಿವೆ. ಜ.30ರಿಂದ ಆರಂಭವಾಗುವ ಕೊನೆಯ ಸುತ್ತಿನ ಪಂದ್ಯದಲ್ಲಿ ಹರ್ಯಾಣ ಹಾಗೂ ಕರ್ನಾಟಕ ಮುಖಾಮುಖಿಯಾಗಲಿವೆ. ಕೇರಳ ತಂಡ ಬಿಹಾರವನ್ನು ಎದುರಿಸಲಿದೆ.

ಹರ್ಯಾಣಕ್ಕೆ ಕ್ವಾರ್ಟರ್ ಫೈನಲ್ ತಲುಪಲು ಕೇವಲ 1 ಅಂಕ ಅಗತ್ಯವಿದೆ. ಒಂದು ವೇಳೆ ಹರ್ಯಾಣ ಸೋತರೆ, ಬಿಹಾರದ ವಿರುದ್ಧ ಕೇರಳ ತಂಡ ಮೂರಂಕ ಗಳಿಸದಂತೆ ಪ್ರಾರ್ಥಿಸಬೇಕಾಗುತ್ತದೆ.

ಕರ್ನಾಟಕ ತಂಡವು ಹರ್ಯಾಣ ವಿರುದ್ಧ ಸೋತರೆ ಕೇರಳ ತಂಡಕ್ಕೆ ಮುಂದಿನ ಸುತ್ತಿಗೇರಲು ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರೆ ಸಾಕಾಗುತ್ತದೆ.

ಬಿಹಾರದ ವಿರುದ್ಧ ಕೇರಳ ಕೇವಲ ಡ್ರಾ ಸಾಧಿಸಿದರೆ ಕರ್ನಾಟಕ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News