×
Ad

ರಣಜಿ ಟ್ರೋಫಿ 2ನೇ ಸೆಮಿ ಫೈನಲ್ | ಮುಂಬೈ ವಿರುದ್ಧ ವಿದರ್ಭ ಉತ್ತಮ ಆರಂಭ

Update: 2025-02-17 20:58 IST

 ಧ್ರುವ್ ಶೋರೆ | PTI 

ನಾಗ್ಪುರ: ಆರಂಭಿಕ ಆಟಗಾರ ಧ್ರುವ್ ಶೋರೆ(74 ರನ್, 109 ಎಸೆತ)ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ದಾನಿಶ್ ಮಾಲೆವಾರ್(79 ರನ್, 157 ಎಸೆತ)ಅರ್ಧಶತಕದ ಕೊಡುಗೆಯ ನೆರವಿನಿಂದ ಸೋಮವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವು ಹಾಲಿ ಚಾಂಪಿಯನ್ ಮುಂಬೈ ತಂಡದ ವಿರುದ್ಧ ಉತ್ತಮ ಆರಂಭ ಪಡೆದಿದ್ದು 400ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸದಲ್ಲಿದೆ.

ಟಾಸ್ ಜಯಿಸಿದ ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರ ಅಥರ್ವ ಟೈಡ್(4 ರನ್) ವಿಕೆಟನ್ನು ಬೇಗನೆ ಕಳೆದುಕೊಂಡಿದ್ದರೂ ಉಳಿದ ಆಟಗಾರರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದಾಟದಂತ್ಯಕ್ಕೆ ವಿದರ್ಭ ತಂಡವು 5 ವಿಕೆಟ್‌ ಗಳ ನಷ್ಟಕ್ಕೆ 308 ರನ್ ಗಳಿಸಿದೆ.

ಯಶ್ ರಾಥೋಡ್(ಔಟಾಗದೆ 47ರ ನ್, 86 ಎಸೆತ)ಹಾಗೂ ಈ ಋತುವಿನಲ್ಲಿ ವಿದರ್ಭ ಪರ ಗರಿಷ್ಠ ರನ್ ಗಳಿಸಿರುವ ಅಕ್ಷಯ್ ವಾಡ್ಕರ್(ಔಟಾಗದೆ 13, 35 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು 6ನೇ ವಿಕೆಟ್‌ ಗೆ ಮುರಿಯದ ಜೊತೆಯಾಟದಲ್ಲಿ 47 ರನ್ ಗಳಿಸಿದ್ದಾರೆ. ವಿದರ್ಭ ತಂಡವು ಕರುಣ್ ನಾಯರ್ ಹಾಗೂ ಮಾಲೆವಾರ್ ವಿಕೆಟ್‌ ಗಳನ್ನು ಕ್ಷಿಪ್ರವಾಗಿ ಕಳೆದುಕೊಂಡಿತು. ಆಗ ರಾಥೋಡ್ ಹಾಗೂ ವಾಡ್ಕರ್ ತಂಡವನ್ನು ಆಧರಿಸಿದರು.

ಅಗ್ರ ಸರದಿಯ ಐವರು ಬ್ಯಾಟರ್‌ಗಳ ಪೈಕಿ ನಾಲ್ವರು ಉತ್ತಮ ಆರಂಭ ಪಡೆದಿದ್ದರೂ ಅದನ್ನು ವ್ಯರ್ಥ ಮಾಡಿದರು. ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ(2-44) ಹಾಗೂ ಆಲ್‌ರೌಂಡರ್ ಶಿವಂ ದುಬೆ (2-35)ತಲಾ ಎರಡು ವಿಕೆಟ್‌ ಗಳನ್ನು ಪಡೆದರು.

ಕ್ವಾರ್ಟರ್ ಫೈನಲ್‌ನಲ್ಲಿ ಅವಳಿ ಅರ್ಧಶತಕಗಳನ್ನು ಗಳಿಸಿದ್ದ ಆಲ್‌ರೌಂಡರ್ ಹರ್ಷ ದುಬೆ ಇನ್ನಷ್ಟೇ ಬ್ಯಾಟಿಂಗ್ ಮಾಡಬೇಕಾಗಿದ್ದು ವಿದರ್ಭ ತಂಡವು ಸದ್ಯ ಸುಸ್ಥಿತಿಯಲ್ಲಿದ್ದು ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಗಳಿಸುವ ವಿಶ್ವಾಸದಲ್ಲಿದೆ.

ಈ ಋತುವಿನಲ್ಲಿ ವಿಸಿಎ ಸ್ಟೇಡಿಯಮ್‌ ನಲ್ಲಿ 2ನೇ ಬಾರಿ ಟಾಸ್ ಜಯಿಸಿದ ವಿದರ್ಭ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕಳೆದ ವರ್ಷ ನವೆಂಬರ್‌ನಲ್ಲಿ ಗುಜರಾತ್ ವಿರುದ್ಧದ ಗರಿಷ್ಠ ಮೊತ್ತದ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಿತ್ತು.

ಕ್ವಾರ್ಟರ್ ಫೈನಲ್‌ನಲ್ಲಿ ಮೊದಲ ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದ ರಾಯ್‌ ಸ್ಟನ್ ಡಯಾಸ್(1-26) ಅವರು ಅಥರ್ವ ವಿಕೆಟನ್ನು ಉರುಳಿಸುವಲ್ಲಿ ಯಶಸ್ವಿಯಾದರು. 3ನೇ ಕ್ರಮಾಂಕದಲ್ಲಿ ಆಡಿದ ಪಾರ್ಥ ರೆಖಾಡೆ ಹಾಗೂ ಶೋರೆ 2ನೇ ವಿಕೆಟ್‌ ಗೆ 54 ರನ್ ಸೇರಿಸಿ ತಂಡವನ್ನು ಆಧರಿಸಿದರು. ರೆಖಾಡೆ(23 ರನ್)ವಿಕೆಟನ್ನು ಪಡೆದ ದುಬೆ ಈ ಜೋಡಿಯನ್ನು ಬೇರ್ಪಡಿಸಿದರು.

ಮಾಲೆವಾರ್ ಜೊತೆ ಕೈಜೋಡಿಸಿದ ಶೋರೆ 3ನೇ ವಿಕೆಟ್‌ ಗೆ ಇನ್ನೂ 51 ರನ್ ಸೇರಿಸಿದರು.

2 ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದ ಕರುಣ್ ನಾಯರ್ ಅವರು ಇಂದು 45 ರನ್ ಗಳಿಸಿ ಔಟಾದರು. ಮಾಲೆಮಾರ್ ತನ್ನ 5ನೇ ಅರ್ಧಶತಕವನ್ನು ಗಳಿಸಿದರು. ನಾಯರ್ ಹಾಗೂ ಮಾಲೆಮಾರ್ 4ನೇ ವಿಕೆಟ್‌ ಗೆ 78 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಲು ನೆರವಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್

ವಿದರ್ಭ ಮೊದಲ ಇನಿಂಗ್ಸ್: 308/5

(ದಾನಿಶ್ ಮಾಲೆವಾರ್ 79, ಧ್ರುವ್ ಶೋರೆ 74, ಯಶ್ ರಾಥೋಡ್ ಔಟಾಗದೆ 47, ಕರುಣ್ ನಾಯರ್ 45, ಶಿವಂ ದುಬೆ 2-35, ಶಮ್ಸ್ ಮುಲಾನಿ 2-44)

ಮೊದಲ ಸೆಮಿ ಫೈನಲ್: ಕೇರಳ 206/4; ನಾಯಕ ಸಚಿನ್ ಬೇಬಿ ಔಟಾಗದೆ 69 ರನ್

ಆತಿಥೇಯ ಗುಜರಾತ್ ವಿರುದ್ಧ ಸೋಮವಾರ ಆರಂಭವಾದ ರಣಜಿ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆರಂಭಿಕ ಕುಸಿತ ಕಂಡಿರುವ ಕೇರಳ ತಂಡ ನಾಯಕ ಸಚಿನ್ ಬೇಬಿ (ಔಟಾಗದೆ 69)ನೆರವಿನಿಂದ ಚೇತರಿಸಿಕೊಂಡಿದೆ.

ಮೊದಲ ದಿನದಾಟದಂತ್ಯಕ್ಕೆ ಕೇರಳ ತಂಡವು 4 ವಿಕೆಟ್‌ ಗಳ ನಷ್ಟಕ್ಕೆ 206 ರನ್ ಗಳಿಸಿದೆ. ಸ್ಪಿನ್ನರ್‌ ಗಳಾದ ರವಿ ಬಿಷ್ಣೋಯಿ ಹಾಗೂ ಪ್ರಿಯಜಿತ್ ಸಿಂಗ್ ಜಡೇಜ ತಲಾ ಒಂದು ವಿಕೆಟ್‌ ಗಳನ್ನು ಪಡೆದಿದ್ದಾರೆ.

ಇತ್ತೀಚೆಗೆ ಜಮ್ಮು-ಕಾಶ್ಮೀರದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 200 ರನ್‌ಗೆ 9 ವಿಕೆಟ್‌ ಗಳನ್ನು ಕಳೆದುಕೊಂಡು ಕುಸಿತ ಕಂಡಿದ್ದ ಕೇರಳ ತಂಡಕ್ಕೆ ಇಂದು ಆರಂಭಿಕ ಆಟಗಾರರಾದ ಅಕ್ಷಯ್ ಚಂದನ್ ಹಾಗೂ ರೋಹನ್ 20.4 ಓವರ್‌ಗಳಲ್ಲಿ 60 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆದರೆ ಕೇರಳ ತಂಡವು 45 ನಿಮಿಷದೊಳಗೆ 26 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

ಚಂದ್ರನ್ 30 ರನ್ ಗಳಿಸಿ ರನೌಟಾದರು. ರಾಹುಲ್(30 ರನ್) ಅವರು ಬಿಷ್ಣೋಯ್ ಬೌಲಿಂಗ್‌ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಶಾನ್ ರೋಜರ್ ಬದಲಿಗೆ 3ನೇ ಕ್ರಮಾಂಕದಲ್ಲಿ ಆಡಿದ ವರುಣ್ ನಾಯನರ್ ಕೇವಲ 10 ರನ್ ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು.ಜಡೇಜ ಸೌರಾಷ್ಟ್ರ ವಿರುದ್ಧ 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಗೊಂಚಲು ಪಡೆದಿದ್ದರು.

ಕೇರಳ 86 ರನ್‌ಗೆ 3 ವಿಕೆಟ್‌ ಗಳನ್ನು ಕಳೆದುಕೊಂಡಿತು.

ಭೋಜನ ವಿರಾಮದ ನಂತರ ಜಲಜ್ ಸಕ್ಸೇನ (30 ರನ್) ಹಾಗೂ ಸಚಿನ್ ಬೇಬಿ 27.5 ಓವರ್‌ಗಳಲ್ಲಿ 4ನೇ ವಿಕೆಟ್‌ ಗೆ 71 ರನ್ ಜೊತೆಯಾಟ ನಡೆಸಿದರು. ಅರ್ಝಾನ್ ಈ ಜೋಡಿಯನ್ನು ಬೇರ್ಪಡಿಸಿದರು. ಸಚಿನ್ ಬೇಬಿ ರಣಜಿ ಟೂರ್ನಿಯ ಎರಡನೇ ಹಂತ ಆರಂಭವಾದ ಬಳಿಕ ತನ್ನ ಮೊದಲ ಅರ್ಧಶತಕ ಗಳಿಸಿದರು.

ಮೊದಲ ದಿನದಾಟದಲ್ಲಿ ಪಿಚ್ ವೇಗದ ಬೌಲರ್‌ಗಳು ಹಾಗೂ ಸ್ಪಿನ್ನರ್‌ಗಳಿಗೆ ತಕ್ಕಮಟ್ಟಿಗೆ ನೆರವಾಗುತ್ತಿದ್ದ ಕಾರಣ ಗುಜರಾತ್ ಸಮಾಧಾನಕರ ಪ್ರದರ್ಶನ ನೀಡಿದೆ. ವೇಗದ ಬೌಲರ್‌ಗಳು ನಿಖರ ಪ್ರದರ್ಶನ ನೀಡಿದರೂ ಬ್ಯಾಟರ್‌ಗಳಿಗೆ ಸಮಸ್ಯೆಯೊಡ್ಡುವಲ್ಲಿ ವಿಫಲರಾದರು.

►ಸಂಕ್ಷಿಪ್ತ ಸ್ಕೋರ್

ಕೇರಳ ಮೊದಲ ಇನಿಂಗ್ಸ್: 206/4

(ಸಚಿನ್ ಬೇಬಿ ಔಟಾಗದೆ 69, ಅಕ್ಷಯ್ ಚಂದ್ರನ್ 30, ರೋಹನ್ 30, ಜಲಜ್ ಸಕ್ಸೇನ 30, ಮುಹಮ್ಮದ್ ಅಝರುದ್ದೀನ್ ಔಟಾಗದೆ 30, ರವಿ ಬಿಷ್ಣೋಯ್ 1-33, ಪ್ರಿಯಜಿತ್ ಜಡೇಜ 1-33, ಅರ್ಝಾನ್ 3-39)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News