ರಣಜಿ : ಗೋವಾ ವಿರುದ್ಧದ ಪಂದ್ಯ ಡ್ರಾ
ಶಿವಮೊಗ್ಗ, ಅ.28: ಕರ್ನಾಟಕ ಹಾಗೂ ಗೋವಾ ತಂಡಗಳ ನಡುವೆ ಇಲ್ಲಿನ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದೆ. ಮೊದಲ ಇನಿಂಗ್ಸ್ ಮುನ್ನಡೆ ಪಡೆದಿರುವ ಮಯಾಂಕ್ ಅಗರ್ವಾಲ್ ಬಳಗಕ್ಕೆ ಮೂರಂಕಗಳು ಲಭಿಸಿದೆ.
ಕರ್ನಾಟಕದ ವೇಗದ ಬೌಲರ್‌ಗಳು ಕೊನೆಯ ದಿನದಾಟವಾದ ಮಂಗಳವಾರ ಮೊದಲ ಒಂದು ಗಂಟೆಯಲ್ಲೇ ನಾಲ್ಕು ವಿಕೆಟ್‌ಗಳನ್ನು ಉರುಳಿಸಿದ್ದರಿಂದ ಗೋವಾ ತಂಡ ಫಾಲೋ ಆನ್‌ಗೆ ಸಿಲುಕಿತು.
ಗೋವಾದ 2ನೇ ಇನಿಂಗ್ಸ್‌ನಲ್ಲಿ 6ನೇ ಓವರ್‌ನ 2ನೇ ಎಸೆತದಲ್ಲಿ ವೇಗಿ ವೈಶಾಖ್ ವಿಜಯಕುಮಾರ್, ಸುಯಶ್ ಪ್ರಭುದೇಸಾಯಿ(13ರನ್) ವಿಕೆಟ್ ಉರುಳಿಸಿ ಕರ್ನಾಟಕದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು.
ಆರಂಭಿಕ ಆಟಗಾರ ಮಂಥನ್ ಖುಟ್ಕರ್(ಔಟಾಗದೆ 55, 135 ಎಸೆತ)ಹಾಗೂ ಅಭಿನವ್ ತೇಜ್ರಾಣಾ(ಔಟಾಗದೆ 73, 126 ಎಸೆತ)ಕರ್ನಾಟಕದ ಬೌಲರ್‌ಗಳನ್ನು ಕಾಡಿದರು. ಮಂಥನ್ ಹಾಗೂ ಅಭಿನವ್ 2ನೇ ವಿಕೆಟ್‌ನಲ್ಲಿ 244 ಎಸೆತಗಳಲ್ಲಿ 123 ರನ್ ಸೇರಿಸಿ ಪಂದ್ಯ ಗೆಲ್ಲುವ ಕರ್ನಾಟಕದ ಕನಸನ್ನು ಭಗ್ನಗೊಳಿಸಿದರು.
ಚಹಾ ವಿರಾಮದ ನಂತರ ವಿಕೆಟ್ ಬೀಳುವ ಲಕ್ಷಣ ಕಾಣಲಿಲ್ಲ. ಹೀಗಾಗಿ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.
ಸೋಮವಾರ 3ನೇ ದಿನದಾಟದಂತ್ಯಕ್ಕೆ ಆರು ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿದ್ದ ಗೋವಾ ತಂಡವು ಮಂಗಳವಾರ ತನ್ನ ಮೊದಲ ಇನಿಂಗ್ಸ್‌ನಲ್ಲಿ 217 ರನ್ ಗಳಿಸಿ ಆಲೌಟಾಯಿತು. ಈ ಮೂಲಕ 154 ರನ್‌ಗಳ ಹಿನ್ನಡೆ ಅನುಭವಿಸಿತು. ಕರ್ನಾಟಕದ ಪರ ವಿದ್ವತ್ ಕಾವೇರಪ್ಪ (5-51) ಹಾಗೂ ಅಭಿಲಾಶ್ ಶೆಟ್ಟಿ (3-74) ಎಂಟು ವಿಕೆಟ್‌ಗಳನ್ನು ಹಂಚಿಕೊಂಡರು.
154 ರನ್ಗಳ ಹಿನ್ನಡೆ ಅನುಭವಿಸಿದ್ದ ಗೋವಾ ತಂಡಕ್ಕೆ ಫಾಲೋ ಆನ್ ವಿಧಿಸಿ ಪ್ರವಾಸಿ ತಂಡದ 10 ವಿಕೆಟ್ಗಳನ್ನು ಬೇಗ ಉರುಳಿಸಿ ಗೆಲುವಿನ ನಗೆ ಬೀರುವ ಕನಸಿನೊಂದಿಗೆ ದಾಳಿಗೆ ಇಳಿದ ಕರ್ನಾಟಕದ ಲೆಕ್ಕಾಚಾರ ಕೈಕೊಟ್ಟಿತು.
ಎರಡನೇ ಇನಿಂಗ್ಸ್‌ನಲ್ಲಿ ಗೋವಾ ತಂಡದ ಬ್ಯಾಟರ್‌ಗಳು 46 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 143 ರನ್ ಗಳಿಸಿ ಕರ್ನಾಟಕ ತಂಡಕ್ಕೆ ಗೆಲುವು ನಿರಾಕರಿಸಿದರು.