×
Ad

ರಣಜಿ ಟ್ರೋಫಿಯಲ್ಲಿ ಸತತ ಎಂಟು ಸಿಕ್ಸರ್ ಸಿಡಿಸಿದ ಮೇಘಾಲಯ ಬ್ಯಾಟರ್ ಆಕಾಶ್ ಕುಮಾರ್ ಚೌಧರಿ ಯಾರು?

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ವೇಗದ ಅರ್ಧಶತಕ ಗಳಿಸಿ ವಿಶ್ವದಾಖಲೆಯನ್ನು ಪುಡಿಗಟ್ಟಿದ ಸ್ಫೋಟಕ ಆಲ್ ರೌಂಡರ್

Update: 2025-11-09 19:44 IST

ಆಕಾಶ್ ಕುಮಾರ್ ಚೌಧರಿ | Photo Credit :  thehindu.com

ಸೂರತ್: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪ್ಲೇಟ್ ಗುಂಪು ಹಂತದ ಪಂದ್ಯದಲ್ಲಿ ಅರುಣಾಚಲ ಪ್ರದೇಶದ ವಿರುದ್ಧ ಕೇವಲ 11 ರನ್ ಗಳಲ್ಲಿ ಅರ್ಧಶತಕ ಗಳಿಸುವ ಮೂಲಕ, ಮೇಘಾಲಯ ಕ್ರಿಕೆಟ್ ತಂಡದ ಬ್ಯಾಟರ್ ಆಕಾಶ್ ಕುಮಾರ್ ಚೌಧರಿ ಅತಿ ವೇಗವಾಗಿ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ದಾಖಲೆಯ ಆಟದಲ್ಲಿ ಅವರು ಸತತ ಎಂಟು ಸಿಕ್ಸರ್ ಗಳನ್ನೂ ಸಿಡಿಸಿದರು.

ಆಕಾಶ್ ಕುಮಾರ್ ಚೌಧರಿ ಎಂಟನೆ ಕ್ರಮಾಂಕದ ಬ್ಯಾಟರ್ ಆಗಿ ಕ್ರೀಸಿಗೆ ಬರುವ ಮುಂಚೆಯೇ ಮೇಘಾಲಯ ತಂಡವು ಆರು ವಿಕೆಟ್ ನಷ್ಟಕ್ಕೆ 576 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಇತಿಹಾಸ ನಿರ್ಮಿಸುವ ಅವಕಾಶವನ್ನು ಅವರು ಕೈಚೆಲ್ಲಲಿಲ್ಲ. ಆಫ್ ಸ್ಪಿನ್ನರ್ ಲಿಮರ್ ದಾಬಿ ಬೌಲಿಂಗ್ ನಲ್ಲಿ ಒಂದು ಸಿಕ್ಸರ್ ಸೇರಿದಂತೆ ಒಟ್ಟು ಎಂಟು ಸಿಕ್ಸರ್ ಗಳನ್ನು ಅವರು ಸತತವಾಗಿ ಬಾರಿಸಿದರು. ಮೇಘಾಲಯ ತಂಡ ತನ್ನ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಾಗ, ಅದು ಆರು ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿತ್ತು. ಇನಿಂಗ್ಸ್ ಅಂತ್ಯಕ್ಕೆ ಅಜೇಯವಾಗಿ ಉಳಿದಿದ್ದ ಆಕಾಶ್ ಕುಮಾರ್ ಚೌಧರಿ ಕೇವಲ 14 ಬಾಲ್ ಗಳಲ್ಲಿ 50 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಆ ಮೂಲಕ, ಕೆಂಪು ಚೆಂಡಿನ ಕ್ರಿಕೆಟ್ ಇತಿಹಾಸದಲ್ಲಿ ಅವರ ಈ ಇನಿಂಗ್ಸ್ ಸ್ಫೋಟಕ ಇನಿಂಗ್ಸ್ ಎಂದು ಸೇರ್ಪಡೆಯಾಯಿತು.

ಇದಕ್ಕೂ ಮುನ್ನ, 2012ರಲ್ಲಿ ಎಸೆಕ್ಸ್ ತಂಡದ ವಿರುದ್ಧ ಲೀಸೆಸ್ಟರ್ ಶೈರ್ ತಂಡವನ್ನು ಪ್ರತಿನಿಧಿಸಿದ್ದ ಇಂಗ್ಲೆಂಡ್ ಬ್ಯಾಟರ್ ವೇಯ್ನ್ ವೈಟ್ ಕೇವಲ 12 ಬಾಲ್ ಗಳಲ್ಲಿ ಗಳಿಸಿದ್ದ ಅರ್ಧ ಶತಕ ಇದುವರೆಗಿನ ಅತಿ ವೇಗದ ಅರ್ಧ ಶತಕವಾಗಿತ್ತು. ಈ ದಾಖಲೆಯನ್ನು 25 ವರ್ಷದ ಆಟಗಾರ ಆಕಾಶ್ ಕುಮಾರ್ ಚೌಧರಿ ಎಲ್ಲರೂ ನಿಬ್ಬೆರಗಾಗುವಂತೆ ಪುಡಿಗಟ್ಟಿದರು.

ಈ ಅರ್ಧಶತಕ ಕೇವಲ ರಣಜಿ ಟ್ರೋಫಿಯಲ್ಲಿ ದಾಖಲಾಗಿರುವ ಇದುವರೆಗಿನ ವೇಗದ ಅರ್ಧ ಶತಕ ಮಾತ್ರವಲ್ಲದೆ, ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇದುವರೆಗೆ ದಾಖಲಾಗಿರುವ ಅತಿ ವೇಗದ ಅರ್ಧ ಶತಕ ಎಂಬ ಶ್ರೇಯಕ್ಕೂ ಭಾಜನವಾಯಿತು. ಈ ದಾಖಲೆಯ ಮೂಲಕ, ಆಕಾಶ್ ಕುಮಾರ್ ಚೌಧರಿ ಎಲ್ಲ ದೇಶೀಯ ಹಾಗೂ ಅಂತಾರಾಷ್ಟ್ರೀಯ ದಾಖಲೆಗಳನ್ನು ಮುರಿದಿದ್ದಾರೆ.

ಈ ಹಿಂದಿನ ಭಾರತೀಯ ದಾಖಲೆಯು ಜಮ್ಮು ಮತ್ತು ಕಾಶ್ಮೀರ ತಂಡದ ಪರ ಕೇವಲ 15 ಬಾಲ್ ಗಳಲ್ಲಿ ಅರ್ಧ ಶತಕ ಗಳಿಸಿದ್ದ ಬಂದೀಪ್ ಸಿಂಗ್ ಹೆಸರಿನಲ್ಲಿತ್ತು.

ರಣಜಿ ಟ್ರೋಫಿಯ ಪ್ಲೇಟ್ ಗುಂಪು ಹಂತದಲ್ಲಿ ಬಿಹಾರದ ವೈಭವ್ ಸೂರ್ಯವಂಶಿಯಿಂದ ಹಿಡಿದು ಗೋವಾದ ಕಶ್ಯಪ್ ಬಕ್ಲೆ ಮತ್ತು ಸ್ನೇಹಲ್ ಕೌತಂಕರ್ ನಡುವೆ ಬಂದ ದಾಖಲೆಯ 606 ರನ್ ಜೊತೆಯಾಟದವರೆಗಿನ ಅಸಾಧಾರಣ ದಾಖಲೆಗಳು ನಿರ್ಮಾಣಗೊಂಡಿರುವ ಹೊತ್ತಿನಲ್ಲೇ ಆಕಾಶ್ ಕುಮಾರ್ ಚೌಧರಿಯಿಂದ ಈ ಬಿರುಗಾಳಿಯಂಥ ಬ್ಯಾಟಿಂಗ್ ಪ್ರದರ್ಶನ ಬಂದಿದೆ. ಹೀಗಿದ್ದೂ, ಕೇವಲ 11 ಬಾಲ್ ಗಳಲ್ಲಿ ಅರ್ಧ ಶತಕ ಗಳಿಸಿದ ಆಕಾಶ್ ಕುಮಾರ್ ಚೌಧರಿಯ ದಾಖಲೆ ಈ ಇಡೀ ಕ್ರೀಡಾಕೂಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ.

2019ರಲ್ಲಿ ನಾಗಾಲ್ಯಾಂಡ್ ತಂಡದೆದುರಿನ ಪಂದ್ಯದ ಮೂಲಕ ಆಕಾಶ್ ಕುಮಾರ್ ಚೌಧರಿ ಪ್ರಥಮ ದರ್ಜೆಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅವರ ಅದೇ ವರ್ಷ ಲಿಸ್ಟ್-ಎ ಪಂದ್ಯಗಳು ಹಾಗೂ ಟಿ-20 ಪಂದ್ಯಗಳಲ್ಲೂ ಕಾಣಿಸಿಕೊಂಡರು. ಅವರು ಮೇಘಾಲಯದ ಪರವಾಗಿ ಕ್ರಮವಾಗಿ ಸಿಕ್ಕಿಂ ಹಾಗೂ ಗುಜರಾತ್ ತಂಡಗಳೆದುರು ಆಡಿದ್ದರು. ಈ ಪಂದ್ಯಕ್ಕೂ ಮುನ್ನ, ಅವರ ದೇಶೀಯ ಕ್ರಿಕೆಟ್ ಪಯಣ ಏರಿಳಿತಗಳನ್ನು ಕಂಡಿತ್ತು. ಇಂದಿನ (ರವಿವಾರ) ಪಂದ್ಯಕ್ಕೂ ಮುನ್ನ ಅವರು ಈ ಹಿಂದಿನ ಹತ್ತು ಇನಿಂಗ್ಸ್ ಗಳಲ್ಲಿ ಒಟ್ಟು ಎರಡು ಅರ್ಧ ಶತಕಗಳನ್ನಷ್ಟೇ ಗಳಿಸಿದ್ದರು. ಅಲ್ಲದೆ, ಸತತ ಐದು ಪಂದ್ಯಗಳಲ್ಲಿ ಅವರು 20 ರನ್ ಗಳಿಸುವ ಮುನ್ನವೇ ತಮ್ಮ ವಿಕೆಟ್ ಕಳೆದುಕೊಂಡಿದ್ದರು.

ಆದರೆ, ಬಿಹಾರದ ಎದುರಿನ ಕಳೆದ ಪಂದ್ಯದಲ್ಲಿ ಅವರು ಅರ್ಧ ಶತಕ ಗಳಿಸುವ ಮೂಲಕ, ತಮ್ಮ ಚೇತರಿಕೆಯ ಸುಳಿವು ನೀಡಿದ್ದರು. ರವಿವಾರದ ಅವರ ಇನಿಂಗ್ಸ್ ಈ ಸುಳಿವನ್ನು ಅದ್ಭುತ ಶೈಲಿಯಲ್ಲಿ ದೃಢಪಡಿಸಿದೆ.

ಕೇವಲ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲದೆ, ಬೌಲಿಂಗ್ ನಲ್ಲೂ ತಮ್ಮ ಕೈಚಳಕ ತೋರಿದ ಆಕಾಶ್ ಕುಮಾರ್ ಚೌಧರಿ, ಅರುಣಾಚಲ ಪ್ರದೇಶ ತಂಡಕ್ಕೆ ಆರಂಭಿಕ ಆಘಾತವನ್ನೂ ನೀಡಿದರು. ಆ ಮೂಲಕ, ತಮ್ಮ ಆಲ್ ರೌಂಡರ್ ವರ್ಚಸ್ಸಿಗೆ ಮತ್ತಷ್ಟು ಮೌಲ್ಯ ದಕ್ಕಿಸಿಕೊಂಡರು. ಕೇವಲ 11 ಬಾಲ್ ಗಳಲ್ಲಿ ಅರ್ಧ ಶತಕ ಸಿಡಿಸಿ, ಅರುಣಾಚಲ ಪ್ರದೇಶಕ್ಕೆ ಆರಂಭಿಕ ಆಘಾತವನ್ನೂ ನೀಡಿದ ಆಕಾಶ್ ಕುಮಾರ್ ಚೌಧರಿ, ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಚಿರಸ್ಥಾಯಿಯನ್ನಾಗಿಸಿಕೊಂಡಿದ್ದಾರೆ.

ಸೌಜನ್ಯ: TOI

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News