×
Ad

500 ಟೆಸ್ಟ್ ವಿಕೆಟ್ ಪಡೆದ ಆರ್.ಅಶ್ವಿನ್

Update: 2024-02-16 17:11 IST

Photo : BCCI

ರಾಜ್‌ಕೋಟ್ : ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ 500 ಟೆಸ್ಟ್ ವಿಕೆಟ್ ಮೈಲಿಗಲ್ಲು ತಲುಪಿದ ಹಿರಿಯ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರನ್ನು ಒಳಗೊಂಡಿರುವ ಭಾರತೀಯ ಬೌಲರ್‌ಗಳ ಎಲಿಟ್ ಕ್ಲಬ್‌ಗೆ ಸೇರ್ಪಡೆಯಾದರು. ಕ್ರಿಕೆಟ್ ಇತಿಹಾಸದಲ್ಲಿ ಅಶ್ವಿನ್ ಈ ಮಹತ್ವದ ಸಾಧನೆ ಮಾಡಿರುವ ಮೂರನೇ ಆಫ್ ಸ್ಪಿನ್ನರ್ ಎಂಬ ಹಿರಿಮೆಗೆ ಪಾತ್ರರಾದರು.

ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಭಾರತದ ಎರಡನೇ ಬೌಲರ್ ಆಗಿದ್ದಾರೆ. ಲೆಜೆಂಡರಿ ಬೌಲರ್ ಅನಿಲ್ ಕುಂಬ್ಳೆ ಮೊದಲನೇ ಸ್ಥಾನದಲ್ಲಿದ್ದಾರೆ. ಕನ್ನಡಿಗ ಕುಂಬ್ಳೆ ಒಟ್ಟು 619 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

37ರ ಹರೆಯದ ಅಶ್ವಿನ್ ಈಗ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನವಾದ ಶುಕ್ರವಾರ ಈ ಮೈಲಿಗಲ್ಲು ತಲುಪಿದರು. ಚೆನ್ನೈನ ಸ್ಪಿನ್ನರ್ ಅಶ್ವಿನ್‌ಗೆ ಈ ಪಂದ್ಯಕ್ಕಿಂತ ಮೊದಲು 500 ವಿಕೆಟ್ ಪೂರೈಸಲು ಕೇವಲ ಒಂದು ವಿಕೆಟ್ ಅಗತ್ಯವಿತ್ತು. ಇಂಗ್ಲೆಂಡ್‌ನ ಓಪನರ್ ಝಾಕ್ ಕ್ರಾವ್ಲೆ ವಿಕೆಟನ್ನು ಉರುಳಿಸಿದ ಅಶ್ವಿನ್ 500ನೇ ವಿಕೆಟ್ ಪೂರೈಸಿದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 500 ವಿಕೆಟ್‌ಗಳನ್ನು ಪಡೆದಿರುವ ಇತರ ಆಫ್ ಸ್ಪಿನ್ನರ್‌ಗಳೆಂದರೆ: ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್(800 ವಿಕೆಟ್) ಹಾಗೂ ಆಸ್ಟ್ರೇಲಿಯದ ನಾಥನ್ ಲಿಯೊನ್(517 ವಿಕೆಟ್). ಲಿಯೊನ್ ಕಳೆದ ವರ್ಷ ಈ ಸಾಧನೆ ಮಾಡಿದ್ದರು. ಒಟ್ಟಾರೆ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದಿರುವ 9ನೇ ಬೌಲರ್ ಆಗಿದ್ದಾರೆ. ತಾನಾಡಿದ 98ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಈ ಸಾಧನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News