×
Ad

ಈ ಬಾರಿ ಆರ್‌ಸಿಬಿ ಐಪಿಎಲ್ ಪ್ರಶಸ್ತಿ ಬರ ನೀಗಿಸಿಕೊಳ್ಳುವುದೇ?

Update: 2025-05-30 21:28 IST

PC : PTI 

ಹೊಸದಿಲ್ಲಿ: ಮುಲ್ಲನ್‌ಪುರದಲ್ಲಿ ಗುರುವಾರ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2025ರ ಆವೃತ್ತಿಯ ಐಪಿಎಲ್ ನಲ್ಲಿ ಫೈನಲ್‌ ಗೆ ಲಗ್ಗೆ ಇಟ್ಟಿದೆ. ದೀರ್ಘಕಾಲದಿಂದ ಕಾಯುತ್ತಿದ್ದ ಪ್ರಶಸ್ತಿಯನ್ನು ಎತ್ತಿಹಿಡಿಯುವ ಅದಮ್ಯ ವಿಶ್ವಾಸದಲ್ಲಿದೆ.

ಈ ಗೆಲುವಿನ ಮೂಲಕ ಆರ್‌ಸಿಬಿ ತಂಡವು 4ನೇ ಬಾರಿ ಐಪಿಎಲ್ ಟಿ20 ಟೂರ್ನಿಯಲ್ಲಿ ಫೈನಲ್‌ ಗೆ ಪ್ರವೇಶಿಸಿದೆ. ಈ ಹಿಂದೆ 2009, 2011 ಹಾಗೂ 2016ರಲ್ಲಿ ಫೈನಲ್‌ ಗೆ ತಲುಪಿದ್ದಾಗ ರನ್ನರ್ಸ್ ಅಪ್‌ ಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಈ ಬಾರಿ ರಜತ್ ಪಾಟಿದಾರ್ ಪಡೆ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಗಿ ಗುರುತಿಸಿಕೊಂಡಿದೆ.

ಐಪಿಎಲ್ ನ ಪ್ರಸಕ್ತ ಪ್ಲೇ ಆಫ್ ಮಾದರಿಯನ್ನು 2011ರಲ್ಲಿ ಪರಿಚಯಿಸಲಾಗಿದೆ. ಲೀಗ್ ಹಂತದ ನಂತರ ಅಗ್ರ-2ರಲ್ಲಿ ಸ್ಥಾನ ಪಡೆಯುವ ತಂಡಗಳು ಫೈನಲ್‌ ಗೆ ತಲುಪಲು ಎರಡು ಅವಕಾಶ ಪಡೆಯುತ್ತವೆ. 2011ರ ನಂತರ 14 ಪ್ರಶಸ್ತಿಗಳ ಪೈಕಿ 11 ಪ್ರಶಸ್ತಿಗಳನ್ನು ಮೊದಲ ಕ್ವಾಲಿಫೈಯರ್‌ ನಲ್ಲಿ ಜಯ ಸಾಧಿಸಿ ನೇರವಾಗಿ ಫೈನಲ್‌ ಗೆ ಪ್ರವೇಶಿಸಿರುವ ತಂಡಗಳೇ ಗೆದ್ದಿವೆ. ಈ ಐತಿಹಾಸಿಕ ಟ್ರೆಂಡ್ ಆರ್‌ಸಿಬಿ ತಂಡದ ಪರವಾಗಿದೆ.

2018ರಿಂದ 2024ರ ತನಕ ಎಲ್ಲ 7 ಚಾಂಪಿಯನ್ಸ್‌ಗಳಾದ ಸಿಎಸ್‌ಕೆ(2018, 2021, 2023), ಮುಂಬೈ ಇಂಡಿಯನ್ಸ್(2019,2020), ಗುಜರಾತ್ ಟೈಟಾನ್ಸ್(2022) ಹಾಗೂ ಕೋಲ್ಕತಾ ನೈಟ್ ರೈಡರ್ಸ್(2024)ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಜಯ ಸಾಧಿಸಿದ್ದವು.

ಈ ಟ್ರೆಂಡ್ ಜೂನ್ 3ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವನ್ನಾಗಿಸಿದೆ.

ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಪ್ರದರ್ಶನ ಹಾಗೂ ರಜತ್ ಪಾಟಿದಾರ್ ಅವರ ದಕ್ಷ ನಾಯಕತ್ವದ ಬಲದಿಂದ ಆರ್‌ಸಿಬಿ ಟೂರ್ನಿಯಲ್ಲಿ ಈ ತನಕ ಅಮೋಘ ಪ್ರದರ್ಶನ ನೀಡಿದೆ. ಫೈನಲ್ ಪಂದ್ಯಕ್ಕಿಂತ ಮೊದಲಿನ ಸಾಕಷ್ಟು ವಿರಾಮವು ಆರ್‌ಸಿಬಿಗೆ ರಣತಂತ್ರವನ್ನು ಹೆಣೆದು, ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ಎಲ್ಲ ತಯಾರಿಗೆ ಪೂರಕವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News