×
Ad

IPL 2025 | ತವರಿನ ಸೋಲಿಗೆ ಆರ್ ಸಿ ಬಿ ವಿದಾಯ; ರಾಜಸ್ಥಾನದ ವಿರುದ್ಧ ರೋಚಕ ಜಯ

Update: 2025-04-24 23:29 IST

ಬೆಂಗಳೂರು : ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(70 ರನ್, 42 ಎಸೆತ, 8 ಬೌಂಡರಿ,2 ಸಿಕ್ಸರ್)ಹಾಗೂ ಸ್ಥಳೀಯ ಆಟಗಾರ ದೇವದತ್ತ ಪಡಿಕ್ಕಲ್(50 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್)ಶತಕಾರ್ಧ, ವೇಗದ ಬೌಲರ್ ಜೋಶ್ ಹೇಝಲ್‌ವುಡ್(4-33) ಅಮೋಘ ಬೌಲಿಂಗ್ ನೆರವಿನಿಂದ ಐಪಿಎಲ್ ಟೂರ್ನಿಯ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್‌ ತಂಡವನ್ನು 11 ರನ್ ಅಂತರದಿಂದ ಸೋಲಿಸಿದೆ. ಈ ಮೂಲಕ ಈ ವರ್ಷದ ಐಪಿಎಲ್‌ನಲ್ಲಿ ತವರು ಮೈದಾನದಲ್ಲಿ ಕೊನೆಗೂ ಗೆಲುವು ದಾಖಲಿಸಿದೆ.

ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ತಂಡವು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ(70 ರನ್, 42 ಎಸೆತ, 8 ಬೌಂಡರಿ,2 ಸಿಕ್ಸರ್)ಹಾಗೂ ಸ್ಥಳೀಯ ಆಟಗಾರ ದೇವದತ್ತ ಪಡಿಕ್ಕಲ್(50 ರನ್, 27 ಎಸೆತ, 4 ಬೌಂಡರಿ, 3 ಸಿಕ್ಸರ್)ಶತಕಾರ್ಧದ ಬೆಂಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿತು. ಗೆಲ್ಲಲು 206 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ರಾಜಸ್ಥಾನಕ್ಕೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(49 ರನ್, 19 ಎಸೆತ, 7 ಬೌಂಡರಿ, 3 ಸಿಕ್ಸರ್)ಎಂದಿನಂತೆಯೇ ಬಿರುಸಿನ ಆರಂಭ ನೀಡಿದರು. 14ರ ಬಾಲಕ ವೈಭವ್ ಸೂರ್ಯವಂಶಿ (16 ರನ್) ಹಾಗೂ ಜೈಸ್ವಾಲ್ 4.2 ಓವರ್‌ಗಳಲ್ಲಿ 52 ರನ್ ಸೇರಿಸಿ ರಾಜಸ್ಥಾನಕ್ಕೆ ಉತ್ತಮ ಆರಂಭ ನೀಡಿದ್ದರು. ವಿಕೆಟ್‌ಕೀಪರ್ ಬ್ಯಾಟರ್ ಧ್ರುವ್ ಜುರೆಲ್(47 ರನ್ , 34 ಎಸೆತ, 3 ಬೌಂಡರಿ,3 ಸಿಕ್ಸರ್) ಒಂದಷ್ಟು ಪ್ರತಿರೋಧ ಒಡ್ಡಿದರು. ಜೈಸ್ವಾಲ್ ಅಗ್ರ ಸ್ಕೋರರ್ ಎನಿಸಿಕೊಂಡರು.

ನಿತಿಶ್ ರಾಣಾ(28 ರನ್, 22 ಎಸೆತ) ನಾಯಕ ರಿಯಾನ್ ಪರಾಗ್(22 ರನ್,10 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಆರ್‌ಸಿಬಿ ಪರ ಹೇಝಲ್‌ವುಡ್ ಯಶಸ್ವಿ ಬೌಲರ್ ಎನಿಸಿಕೊಂಡರು. ಕೃನಾಲ್ ಪಾಂಡ್ಯ(2-31)2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಆರ್‌ಸಿಬಿಯ ಫಿಲ್ ಸಾಲ್ಟ್(26 ರನ್, 23 ಎಸೆತ, 4 ಬೌಂಡರಿ)ಹಾಗೂ ಕೊಹ್ಲಿ 6.4 ಓವರ್‌ಗಳಲ್ಲಿ 61 ರನ್ ಸೇರಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ವನಿಂದು ಹಸರಂಗ(1-30)ಈ ಜೋಡಿಯನ್ನು ಬೇರ್ಪಡಿಸಿದರು.

32 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ ಈ ವರ್ಷದ ಐಪಿಎಲ್‌ನಲ್ಲಿ ಬೆಂಗಳೂರಿನಲ್ಲಿ ಮೊದಲ ಅರ್ಧಶತಕ ಪೂರೈಸಿದ ಕೊಹ್ಲಿ ಅವರು ಪಡಿಕ್ಕಲ್ ಜೊತೆ 2ನೇ ವಿಕೆಟ್‌ಗೆ 51 ಎಸೆತಗಳಲ್ಲಿ 95 ರನ್ ಸೇರಿಸಿದರು. ಕೊಹ್ಲಿ ವಿಕೆಟನ್ನು ಉರುಳಿಸಿದ ಜೋಫ್ರಾ ಆರ್ಚರ್(1-33) ಉತ್ತಮ ಜೊತೆಯಾಟಕ್ಕೆ ತೆರೆ ಎಳೆದರು.

ಪಡಿಕ್ಕಲ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 50 ರನ್ ಪೂರೈಸಿದ ಬೆನ್ನಿಗೇ ಸಂದೀಪ್ ಶರ್ಮಾಗೆ(2-45)ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟಿದಾರ್(1) ವಿಕೆಟನ್ನು 17ನೇ ಓವರ್‌ನಲ್ಲಿ ಕಬಳಿಸಿದ ಸಂದೀಪ್ ಶರ್ಮಾ ಆರ್‌ಸಿಬಿಯ ಮಿನಿ ಕುಸಿತಕ್ಕೆ ಕಾರಣರಾದರು.

ಟಿಮ್ ಡೇವಿಡ್(23 ರನ್, 15 ಎಸೆತ) ಹಾಗೂ ಜಿತೇಶ್ ಶರ್ಮಾ(ಔಟಾಗದೆ 20, 10 ಎಸೆತ) 5ನೇ ವಿಕೆಟ್ ಜೊತೆಯಾಟದಲ್ಲಿ 19 ಎಸೆತಗಳಲ್ಲಿ 42 ರನ್ ಸೇರಿಸಿ ಆರ್‌ಸಿಬಿ ಸ್ಕೋರನ್ನು 200ರ ಗಡಿ ದಾಟಿಸಿದರು.

ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ತವರು ಮೈದಾನದಲ್ಲಿ ಸತತ 4ನೇ ಬಾರಿ ಟಾಸ್ ಸೋತಿದ್ದಾರೆ. ರಾಜಸ್ಥಾನದ ಹಂಗಾಮಿ ನಾಯಕ ರಿಯಾನ್ ಪರಾಗ್ ತನ್ನ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು, ಶ್ರೀಲಂಕಾದ ಮಹೀಶ್ ತೀಕ್ಷಣ ಬದಲಿಗೆ ಎಡಗೈ ವೇಗಿ ಫಝಲ್‌ಹಕ್ ಫಾರೂಕಿ ಅವಕಾಶ ಪಡೆದರು.

ಆರ್‌ಸಿಬಿ ತನ್ನ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 3 ದಿನಗಳ ಹಿಂದೆ ಪಂಜಾಬ್ ಕಿಂಗ್ಸ್ ವಿರುದ್ದ ಆಡಿದ್ದ ತಂಡವನ್ನೇ ಕಣಕ್ಕಿಳಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News