ಮಳೆಯಿಂದ ರದ್ದಾದ ಪಂದ್ಯದ ಟಿಕೆಟ್ ಹಣ ವಾಪಸ್: ಆರ್‌ಸಿಬಿ
PC : X
ಬೆಂಗಳೂರು: ಶನಿವಾರ ನಡೆಯಬೇಕಾಗಿದ್ದ ಹಾಗೂ ಮಳೆಯಿಂದ ರದ್ದಾದ ಕೋಲ್ಕತ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದವರಿಗೆ ಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ರಕಟಿಸಿದೆ.
ಬೆಂಗಳೂರಿನ ಎಮ್. ಚಿನ್ನಾಸ್ವಾಮಿ ಸ್ಟೇಡಿಯಮ್ ನಲ್ಲಿ ನಡೆಯಬೇಕಾಗಿದ್ದ ಪಂದ್ಯವನ್ನು ನಿರಂತರ ಮಳೆಯಿಂದಾಗಿ ರದ್ದುಗೊಳಿಸಲಾಗಿತ್ತು. ಪಂದ್ಯದಲ್ಲಿ ನಾಣ್ಯ ಚಿಮ್ಮುಗೆಯೂ ನಡೆದಿರಲಿಲ್ಲ.
‘‘ಮೇ 17ರಂದು ನಡೆಯಬೇಕಾಗಿದ್ದ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರದ್ದಾಗಿರುವ ಹಿನ್ನೆಲೆಯಲ್ಲಿ, ಸಕ್ರಮ ಟಿಕೆಟ್‌ಗಳನ್ನು ಹೊಂದಿರುವವರು ಸಂಪೂರ್ಣ ಮರುಪಾವತಿಗೆ ಅರ್ಹರಾಗಿದ್ದಾರೆ’’ ಎಂದು ಆರ್‌ಸಿಬಿ ಹೇಳಿಕೆಯೊಂದರಲ್ಲಿ ತಿಳಿಸಿದೆ. ‘‘ಡಿಜಿಟಲ್ ಟಿಕೆಟ್ ಗಳನ್ನು ಖರೀದಿಸಿದವರಿಗೆ ಅವರು ಟಿಕೆಟ್ ಗಳನ್ನು ಖರೀದಿಸಲು ಬಳಸಿದ ಮೂಲ ಖಾತೆಗಳಿಗೆ 10 ಕೆಲಸದ ದಿನಗಳ ಅವಧಿಯಲ್ಲಿ ಮರುಪಾವತಿ ಮಾಡಲಾಗುವುದು. ಮರುಪಾವತಿಯು ಮೇ 31ರೊಳಗೆ ತಲುಪದಿದ್ದರೆ, ದಯವಿಟ್ಟು refund@ticketgenie.in ಗೆ ಖರೀದಿ ವಿವರಗಳೊಂದಿಗೆ ಇಮೇಲ್ ಕಳುಹಿಸಿ’’ ಎಂದು ಅದು ಹೇಳಿದೆ.
‘‘ಕೌಂಟರ್‌ಗಳಿಂದ ಟಿಕೆಟ್ ಖರೀದಿಸಿದವರು ಮರುಪಾವತಿ ಪಡೆಯಲು ಮೂಲ ಟಿಕೆಟ್‌ಗಳನ್ನು ತಾವು ಖರೀದಿಸಿದ ಕೌಂಟರ್‌ಗಳಲ್ಲಿ ಹಿಂದಿರುಗಿಸಬೇಕು. ಉಚಿತ ಟಿಕೆಟ್ ಗಳಿಗೆ ಮರುಪಾವತಿ ಅನ್ವಯಿಸುವುದಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
ಇದಕ್ಕೂ ಮೊದಲು, ಮೇ 13 ಮತ್ತು 17ರಂದು ನಡೆಯಬೇಕಾಗಿದ್ದ ಪಂದ್ಯಗಳ ಟಿಕೆಟ್‌ಗಳ ಹಣವನ್ನು ಮರುಪಾವತಿ ಮಾಡುವುದಾಗಿ ಆರ್‌ಸಿಬಿ ಘೋಷಿಸಿತ್ತು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಅಂದು ನಡೆಯಬೇಕಾಗಿದ್ದ ಪಂದ್ಯಗಳನ್ನು ಮುಂದೂಡಲಾಗಿತ್ತು.