ಎಸ್ ಆರ್ ಎಚ್ ಗೆ ಪ್ಯಾಟ್ ಕಮಿನ್ಸ್ ಮರು ಸೇರ್ಪಡೆ?
ಪ್ಯಾಟ್ ಕಮಿನ್ಸ್ | PC : NDTV
ಹೊಸದಿಲ್ಲಿ: ಬೆಂಗಳೂರಿನಲ್ಲಿ ಮೇ 17ರಿಂದ ಐಪಿಎಲ್ ಟೂರ್ನಿ ಪುನರಾರಂಭವಾಗುವ ಮೊದಲು ಪ್ಯಾಟ್ ಕಮಿನ್ಸ್ ಅವರು ಸನ್ ರೈಸರ್ಸ್ ಹೈದರಾಬಾದ್(ಎಸ್‌ಆರ್‌ಎಚ್)ತಂಡವನ್ನು ಸೇರಲಿದ್ದಾರೆ ಎಂದು ‘ಸ್ಟಾರ್‌ಸ್ಪೋರ್ಟ್’ ವರದಿ ಮಾಡಿದೆ. ಆದರೆ ಅವರು ಯಾವಾಗ ಭಾರತಕ್ಕೆ ಆಗಮಿಸುತ್ತಾರೆಂದು ಸ್ಪಷ್ಟವಾಗಿಲ್ಲ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಮೇ 9ರಂದು ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿದ ನಂತರ ಆಸ್ಟ್ರೇಲಿಯದ ವೇಗದ ಬೌಲರ್ ಕಮಿನ್ಸ್ ಹಲವು ವಿದೇಶಿ ಆಟಗಾರರೊಂದಿಗೆ ಸ್ವದೇಶಕ್ಕೆ ವಾಪಸಾಗಿದ್ದರು.
ಯುದ್ಧ ವಿರಾಮ ಘೋಷಣೆಯಾದ ನಂತರ ಎಚ್ ಅರ್ ಎಚ್ ನಾಯಕ ಕಮಿನ್ಸ್ ಅವರು ತನ್ನ ತಂಡವು ಪ್ಲೇ ಆಫ್ ಸ್ಪರ್ಧೆಯಿಂದ ಹೊರಗುಳಿದಿದ್ದರೂ ಐಪಿಎಲ್ ನ ಉಳಿದ ಪಂದ್ಯಗಳಲ್ಲಿ ಆಡಲು ಮುಂದಾಗಿದ್ದಾರೆ. ಪ್ರಮುಖ ಆಸ್ಟ್ರೇಲಿಯದ ಆಟಗಾರರ ಭಾಗವಹಿಸುವಿಕೆಯ ಬಗ್ಗೆ ಪ್ರಶ್ನೆ ಉದ್ಭವಿಸಿರುವ ಮಧ್ಯೆ, ವಿಶೇಷವಾಗಿ, ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸಮೀಪಿಸುತ್ತಿರುವಾಗ ಕಮಿನ್ಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಜೂನ್ 11ರಿಂದ ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕಮಿನ್ಸ್ ಅವರು ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
2024ರ ಐಪಿಎಲ್ ನಲ್ಲಿ ರನ್ನರ್ಸ್ ಅಪ್ ಆಗಿದ್ದ ಎಸ್‌ಆರ್‌ಎಚ್, 2025ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಪ್ಲೇ ಆಫ್ ರೇಸ್ ನಿಂದ ನಿರ್ಗಮಿಸಿದ ಮೊದಲ ತಂಡ ಎನಿಸಿಕೊಂಡಿದೆ. ಲಕ್ನೊ ಸೂಪರ್ ಜಯಂಟ್ಸ್(ಮೇ 19), ರಾಯಲ್ ಚಾಲೆಂಜರ್ಸ್ ಬೆಂಗಳೂರು(ಮೇ 23)ಹಾಗೂ ಕೋಲ್ಕತಾ ನೈಟ್ ರೈಡರ್ಸ್(ಮೇ 25)ವಿರುದ್ಧ ತವರಿನಿಂದ ಹೊರಗೆ ಉಳಿದೆಲ್ಲಾ ಲೀಗ್ ಪಂದ್ಯಗಳನ್ನು ಆಡಲಿದೆ.
ಬಿಸಿಸಿಐ ಮೇ 12ರಂದು ಐಪಿಎಲ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, 13 ಲೀಗ್ ಪಂದ್ಯಗಳು ಹಾಗೂ 4 ಪ್ಲೇ ಆಫ್ ಪಂದ್ಯಗಳು ನಡೆಯುವ ಮೂಲಕ ಈ ವರ್ಷದ ಐಪಿಎಲ್ ಮುಕ್ತಾಯವಾಗಲಿದೆ.