×
Ad

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ಸ್ | ರಿಷಭ್ ಪಂತ್ ಜೀವನಶ್ರೇಷ್ಠ ಸಾಧನೆ

Update: 2025-07-02 20:22 IST

ರಿಷಭ್ ಪಂತ್ | PC : X \ @RishabhPant17

ದುಬೈ: ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಹೊಸ ಪುರುಷರ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ತನ್ನ ಜೀವನಶ್ರೇಷ್ಠ ರೇಟಿಂಗ್ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಗಳಿಸಿ ಅಮೋಘ ಪ್ರದರ್ಶನ ನೀಡಿದ್ದ ಪಂತ್ ಅವರು ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ ನಲ್ಲಿ ಆರನೇ ಸ್ಥಾನ ಪಡೆದಿದ್ದಾರೆ.

ಭಾರತವು ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್‌ ಗಳ ಅಂತರದಿಂದ ಸೋತ ಹೊರತಾಗಿಯೂ ಪಂತ್ ಅವರು 134 ಹಾಗೂ 118 ರನ್ ಗಳಿಸಿದ ಪರಿಣಾಮ 801 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ಹಾಲಿ ನಂ.1 ಟೆಸ್ಟ್ ಆಟಗಾರ ಜೋ ರೂಟ್‌ಗಿಂತ ಕೇವಲ 88 ಅಂಕಗಳಿಂದ ಹಿಂದಿದ್ದಾರೆ. 2022ರಲ್ಲಿ 5ನೇ ಸ್ಥಾನ ಪಡೆದಿದ್ದ ಪಂತ್ ಜೀವನಶ್ರೇಷ್ಠ ಸಾಧನೆ ಮಾಡಿದ್ದು, ಆ ಸಾಧನೆಯನ್ನು ಪುನರಾವರ್ತಿಸುವ ಹೊಸ್ತಿಲಲ್ಲಿದ್ದಾರೆ.

ಹೆಡ್ಡಿಂಗ್ಲೆ ಪಂದ್ಯದಲ್ಲಿ 28 ಹಾಗೂ 53 ರನ್ ಗಳಿಸಿದ್ದ ಜೋ ರೂಟ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ರೂಟ್‌ ಗಿಂತ 15 ರೇಟಿಂಗ್ ಪಾಯಿಂಟ್ಸ್‌ ನಿಂದ ಹಿಂದಿರುವ ಹ್ಯಾರಿ ಬ್ರೂಕ್ 2ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಬೆನ್ ಡಕೆಟ್ 8ನೇ ಸ್ಥಾನ ತಲುಪಿ ಜೀವನಶ್ರೇಷ್ಠ ರ‍್ಯಾಂಕಿಂಗ್ ತಲುಪಿದ್ದಾರೆ. ಲೀಡ್ಸ್ ಟೆಸ್ಟ್‌ನ 2ನೇ ಇನಿಂಗ್ಸ್‌ ನಲ್ಲಿ 149 ರನ್ ಗಳಿಸಿದ್ದ ಡಕೆಟ್ ಈ ಸಾಧನೆ ಮಾಡಿದ್ದಾರೆ.

ಬಾರ್ಬಡೋಸ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ 159 ರನ್ ಅಂತರದಿಂದ ಜಯಶಾಲಿಯಾಗಿದ್ದ ಆಸ್ಟ್ರೇಲಿಯ ತಂಡದ ಪರ ಎರಡು ಅರ್ಧಶತಕಗಳನ್ನು ಗಳಿಸಿದ್ದ ಟ್ರಾವಿಸ್ ಹೆಡ್ 3 ಸ್ಥಾನಗಳಲ್ಲಿ ಭಡ್ತಿ ಪಡೆದು 10ನೇ ಸ್ಥಾನ ತಲುಪಿದ್ದಾರೆ.

ಶ್ರೀಲಂಕಾದ ಪಥುಮ್ ನಿಸ್ಸಾಂಕ 14 ಸ್ಥಾನ ಮೇಲಕ್ಕೇರಿ 17ನೇ ಸ್ಥಾನ ತಲುಪಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಕೊಲಂಬೊದಲ್ಲಿ ಬಾಂಗ್ಲಾದೇಶ ವಿರುದ್ಧ 158 ರನ್ ಗಳಿಸಿದ ನಂತರ ನಿಸ್ಸಾಂಕ ರ‍್ಯಾಂಕಿಂಗ್‌ ನಲ್ಲಿ ಏರಿಕೆ ಕಂಡಿದ್ದಾರೆ.

ಕುಶಾಲ್ ಮೆಂಡಿಸ್ ತನ್ನ ರ‍್ಯಾಂಕಿಂಗ್‌ ನಲ್ಲಿ 4 ಸ್ಥಾನ ಭಡ್ತಿ ಪಡೆದಿದ್ದು, 30ನೇ ಸ್ಥಾನ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಹೊಸಮುಖ ಲುಯಾನ್-ಡ್ರೆ ಪ್ರಿಟೋರಿಯಸ್ ಝಿಂಬಾಬ್ವೆ ವಿರುದ್ಧ ತನ್ನ ಚೊಚ್ಚಲ ಶತಕ ಗಳಿಸಿದ ನಂತರ ಬ್ಯಾಟಿಂಗ್ ರ‍್ಯಾಂಕಿಂಗ್‌ ಗೆ ಪ್ರವೇಶಿಸಿ 68ನೇ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಹೆಡ್ಡಿಂಗ್ಲೆಯಲ್ಲಿ 5 ವಿಕೆಟ್ ಗೊಂಚಲು ಪಡೆದ ನಂತರ ಜಸ್‌ಪ್ರಿತ್ ಬುಮ್ರಾ ಅವರು ಟೆಸ್ಟ್ ಬೌಲರ್‌ ಗಳ ರ‍್ಯಾಂಕಿಂಗ್‌ ನಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಆಸ್ಟ್ರೇಲಿಯದ ಜೋಶ್ ಹೇಝಲ್‌ವುಡ್ ಒಂದು ಸ್ಥಾನ ಮೇಲಕ್ಕೇರಿ 4ನೇ ಸ್ಥಾನ ತಲುಪಿದ್ದಾರೆ.

ವೆಸ್ಟ್‌ಇಂಡೀಸ್‌ನ ಜೇಡನ್ ಸೀಲ್ಸ್ 9ನೇ ಸ್ಥಾನಕ್ಕೇರಿದ್ದಾರೆ. ಬಾಂಗ್ಲಾದೇಶ ವಿರುದ್ಧ 2ನೇ ಇನಿಂಗ್ಸ್‌ ನಲ್ಲಿ 5 ವಿಕೆಟ್‌ ಗಳನ್ನು ಪಡೆದಿದ್ದ ಶ್ರೀಲಂಕಾದ ಸ್ಪಿನ್ನರ್ ಪ್ರಭಾತ್ ಜಯಸೂರ್ಯ 14ನೇ ಸ್ಥಾನ ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡದ ವಿರುದ್ಧ್ದ ಸಾಧಾರಣ ಪ್ರದರ್ಶನ ನೀಡಿದ ಹೊರತಾಗಿಯೂ ಟೆಸ್ಟ್ ಆಲ್‌ರೌಂಡರ್‌ ಗಳ ರ‍್ಯಾಂಕಿಂಗ್‌ ನಲ್ಲಿ ರವೀಂದ್ರ ಜಡೇಜ ತನ್ನ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು ಸುಧಾರಣೆ ಕಂಡಿದ್ದಾರೆ.

ಝಿಂಬಾಬ್ವೆ ವಿರುದ್ಧ ಶತಕ ಗಳಿಸಿದ ನಂತರ 7 ಸ್ಥಾನ ಭಡ್ತಿ ಪಡೆದಿರುವ ವಿಯಾನ್ ಮುಲ್ದರ್ ಜಂಟಿ 15ನೇ ಸ್ಥಾನ ಪಡೆದಿದ್ದಾರೆ. ಅವರ ಸಹ ಆಟಗಾರ ಕಾರ್ಬಿನ್ ಬಾಷ್ ಝಿಂಬಾಬ್ವೆ ವಿರುದ್ಧ ಶತಕ ಗಳಿಸಿದ ನಂತರ 42 ಸ್ಥಾನಗಳಲ್ಲಿ ಭಡ್ತಿ ಪಡೆದು 19ನೇ ಸ್ಥಾನ ತಲುಪಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News