ಎಂ.ಎಸ್.ಧೋನಿಯ ದೀರ್ಘಕಾಲದ ದಾಖಲೆ ಮುರಿದ ರಿಷಭ್ ಪಂತ್
ರಿಷಭ್ ಪಂತ್ | PC : PTI
ಲಂಡನ್: ಭಾರತ ತಂಡದ ಉಪ ನಾಯಕ ರಿಷಭ್ ಪಂತ್ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ತನ್ನ ನಿರ್ಭೀತಿಯ ಬ್ಯಾಟಿಂಗ್ ನ ಮೂಲಕ ಹಲವು ದಾಖಲೆಗಳನ್ನು ಮುರಿದು ಇತಿಹಾಸ ನಿರ್ಮಿಸಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗರಿಷ್ಠ ಸಿಕ್ಸರ್ ಗಳನ್ನು ಸಿಡಿಸಿದ ಪಂತ್ ಅವರು ಲೆಜೆಂಡ್ ಆಟಗಾರ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಮುರಿದರು. ಸ್ಫೋಟಕ ಶೈಲಿಯ ಎಡಗೈ ಬ್ಯಾಟರ್ ಇದೀಗ ಇಂಗ್ಲೆಂಡ್ ವಿರುದ್ಧ 35 ಸಿಕ್ಸರ್ ಗಳನ್ನು ಸಿಡಿಸುವುದರೊಂದಿಗೆ ರಿಚರ್ಡ್ಸ್(34)ದಾಖಲೆಯನ್ನು ಮುರಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಭಾರತದ ಮಾಜಿ ಟೆಸ್ಟ್ ನಾಯಕ ರೋಹಿತ್ ಶರ್ಮಾರ ದಾಖಲೆಯನ್ನು ಸರಿಗಟ್ಟುವ ಮೂಲಕ 2ನೇ ಸ್ಥಾನ ಪಡೆದರು. ರೋಹಿತ್ ಹಾಗೂ ರಿಷಭ್ ತಲಾ 88 ಸಿಕ್ಸರ್ ಗಳನ್ನು ಸಿಡಿಸಿದ್ದಾರೆ. ಪಂತ್ ಕೇವಲ 46 ಟೆಸ್ಟ್ ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದರೆ, ರೋಹಿತ್ 67 ಇನಿಂಗ್ಸ್ ನಲ್ಲಿ ಆಡಿದ್ದರು. ವೀರೇಂದ್ರ ಸೆಹ್ವಾಗ್ ಅವರ ಸಾರ್ವಕಾಲಿಕ ಭಾರತದ ದಾಖಲೆ(90)ಸರಿಗಟ್ಟಲು ಪಂತ್ ಗೆ ಕೇವಲ 2 ಸಿಕ್ಸರ್ ಸಿಡಿಸುವ ಅಗತ್ಯವಿದೆ.
27ರ ಹರೆಯದ ಪಂತ್ ಅವರು ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಸರಣಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ವಿಕೆಟ್‌ಕೀಪರ್ ಎಂಬ ಹಿರಿಮೆಗೂ ಪಾತ್ರರಾದರು. ಇದರೊಂದಿಗೆ ಎಂ.ಎಸ್. ಧೋನಿ ಹೆಸರಲ್ಲಿದ್ದ ದೀರ್ಘಕಾಲದ ದಾಖಲೆಯೊಂದನ್ನು ಮುರಿದರು.
ಪಂತ್ ಈ ತನಕ 3 ಪಂದ್ಯಗಳಲ್ಲಿ ಒಟ್ಟು 416 ರನ್ ಗಳಿಸಿದ್ದು, ಇಂಗ್ಲೆಂಡ್ ಮಣ್ಣಿನಲ್ಲಿ ಒಂದೇ ಟೆಸ್ಟ್ ಸರಣಿಯಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ಪ್ರವಾಸಿ ತಂಡದ ಮೊದಲ ವಿಕೆಟ್‌ಕೀಪರ್ ಆಗಿದ್ದಾರೆ. ಧೋನಿ ಅವರು 2014ರ ಇಂಗ್ಲೆಂಡ್ ಪ್ರವಾಸದ ವೇಳೆ ಒಟ್ಟು 349 ರನ್ ಗಳಿಸಿದ್ದರು.
ಬೆರಳು ನೋವನ್ನು ನುಂಗಿ ದಿಟ್ಟತನದಿಂದ ಆಡಿದ ಪಂತ್ ಎಲ್ಲರ ಮನ ಗೆದ್ದಿದ್ದಾರೆ. ತೋರುಬೆರಳಿನ ಗಾಯದೊಂದಿಗೆ ಎಂದಿನಂತೆ ಆಕ್ರಮಣಕಾರಿಯಾಗಿ ಆಡಿದ ಪಂತ್ 112 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 74 ರನ್ ಗಳಿಸಿದರು. ಪಂತ್ ಅವರು ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 8ನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು. ಎಂ.ಎಸ್ ಧೋನಿಯನ್ನು(23 ಇನಿಂಗ್ಸ್‌ಗಳಲ್ಲಿ 8)ಸರಿಗಟ್ಟಿದ್ದಾರೆ.
ಭೋಜನ ವಿರಾಮಕ್ಕೆ ಮೊದಲು ಕ್ಷಿಪ್ರವಾಗಿ ಒಂದು ರನ್ ಗಳಿಸುವ ಧಾವಂತದಲ್ಲಿದ್ದಾಗ ಪಂತ್ ರನೌಟಾದರು. ಈ ಮೂಲಕ ಅವರ ಪ್ರತಿದಾಳಿಯ ಇನಿಂಗ್ಸ್ ಅಂತ್ಯವಾಯಿತು.
►ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದವರು
ರ‍್ಯಾಂಕ್ ಆಟಗಾರ ಸಿಕ್ಸರ್
1 ರಿಷಭ್ ಪಂತ್ 35
2 ವಿವಿ ರಿಚರ್ಡ್ಸ್ 34
3 ಟಿಮ್ ಸೌಥಿ 30
4 ಯಶಸ್ವಿ ಜೈಸ್ವಾಲ್ 27
5 ಶುಭಮನ್ ಗಿಲ್ 26